ಕರ್ನಾಟಕ

karnataka

ETV Bharat / state

₹100 ಕೋಟಿ ವೆಚ್ಚದಲ್ಲಿ ಪೊಲೀಸ್‌ ಇಲಾಖೆಗೆ ಹೊಸ ವಾಹನಗಳ ಖರೀದಿಗೆ ತೀರ್ಮಾನ - ನಾಡಪ್ರಭು ಕೆಂಪೇಗೌಡ ಬಡಾವಣೆ

ಪೊಲೀಸ್ ಇಲಾಖೆಯಲ್ಲಿರುವ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸಿ ಹೊಸ ವಾಹನಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಗೃಹ ಸಚಿವ ಡಾ. ಜಿ.ಪರಮೇಶ್ವರ್
ಗೃಹ ಸಚಿವ ಡಾ. ಜಿ.ಪರಮೇಶ್ವರ್

By ETV Bharat Karnataka Team

Published : Dec 5, 2023, 7:47 PM IST

Updated : Dec 5, 2023, 7:58 PM IST

ಪೊಲೀಸ್‌ ಇಲಾಖೆಗೆ ಹೊಸ ವಾಹನಗಳ ಖರೀದಿಗೆ ತೀರ್ಮಾನ

ಬೆಳಗಾವಿ/ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 1,700ಕ್ಕೂ ಹೆಚ್ಚು ವಾಹನಗಳನ್ನು ಸ್ಕ್ರಾಂಪ್‌ಗೊಳಿಸಲು (ನಿರುಪಯುಕ್ತ) ತೀರ್ಮಾನಿಸಲಾಗಿದ್ದು, ಹಂತಹಂತವಾಗಿ ನಿರುಪಯುಕ್ತಗೊಳಿಸುವುದರ ಜೊತೆಗೆ 100 ಕೋಟಿ ರೂ.ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಇಂದು ಹೇಳಿದರು.

ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಶ್ರೀನಿವಾಸ ಜಿ.ಎಚ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗ್ನಿಶಾಮಕ ಠಾಣೆ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸುವ ಹಾಗೂ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಅನುಮತಿ ನೀಡುವ ಸಂಬಂಧ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಅವಧಿ ಮೀರಿದ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನು ನಿರುಪಯುಕ್ತಗೊಳಿಸಿದಲ್ಲಿ ಇಲಾಖೆಯ ಮೂಲ ಚಟುವಟಿಕೆಗಳಿಗೆ ತೊಂದರೆಯಾಗುವುದರಿಂದ ವಾಹನಗಳ ನೋಂದಣಿ ಪತ್ರವನ್ನು ನವೀಕರಿಸಲು ಕೇಂದ್ರ ಸರಕಾರದ ಅನುಮತಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಮಸ್ಕಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ?:ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ್ (ಮಸ್ಕಿ) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಮಸ್ಕಿ ತಾಲೂಕಿನಲ್ಲಿ ನೂತನ ಅಗ್ನಿಶಾಮಕ ಠಾಣೆಯ ಸ್ಥಾಪನೆಗೆ ಸಹಮತಿ ನೀಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಸಂಭವಿಸುವ ಅಗ್ನಿ ಕರೆಗಳನ್ನು ಆಧರಿಸಿ ನೂತನ ಅಗ್ನಿಶಾಮಕ ಠಾಣೆಯ ಸೃಜನೆಯ ಬಗ್ಗೆ ಪರಿಶೀಲಿಸಲಾಗುವುದು. ಮಸ್ಕಿ ತಾಲೂಕಿನಲ್ಲಿ ನೂತನವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ 2017ರಿಂದ 2022ರವರೆಗೆ ಒಟ್ಟಾರೆ 5 ವರ್ಷದ ಅವಧಿಯಲ್ಲಿ 243 ಅಗ್ನಿ ಕರೆಗಳು ಹಾಗೂ 13 ರಕ್ಷಣಾ ಕರೆಗಳಿದ್ದು, ಮಸ್ಕಿ ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸಿದ್ದಲ್ಲಿ ಹತ್ತಿರವಿರುವ ಲಿಂಗಸೂಗುರು 30 ಕಿ.ಮೀ ಮತ್ತು ಸಿಂಧನೂರು 30 ಕಿ.ಮೀ ಅಂತರದಲ್ಲಿರುವ ಅಗ್ನಿಶಾಮಕ ಠಾಣೆಯಿಂದ ಬೆಂಕಿ ನಂದಿಸಲಾಗುತ್ತಿದೆ. ಇನ್ನೊಂದೆಡೆ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ನಿಗದಿಪಡಿಸಿದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಡಿಕೆಶಿ ಪರವಾಗಿ ರಾಮಲಿಂಗಾರೆಡ್ಡಿ ಉತ್ತರ:ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಒಂದು ವರ್ಷದೊಳಗೆ ಅಗತ್ಯ ಮೂಲಸೌಕರ್ಯಗಳನ್ನು ಸರಕಾರ ಕಲ್ಪಿಸಿಕೊಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪರವಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.

ಬಿಜೆಪಿ ಸದಸ್ಯ ಎಸ್.ಸುರೇಶಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡುತ್ತಾ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಜನರು ಸಮಸ್ಯೆ ಅನುಭವಿಸುತ್ತಿರುವುದು ಗಮನದಲ್ಲಿದ್ದು, ವರ್ಷದೊಳಗೆ ಪರಿಹರಿಸಲಾಗುವುದು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ, ರೆವಿನ್ಯೂ ನಿವೇಶನಗಳನ್ನು ರಚಿಸಿ ಮಾರಾಟ ಮಾಡಿರುವುದು, ಹೈಕೋರ್ಟ್​ನಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಬಡಾವಣೆ ನಿರ್ಮಾಣಕ್ಕಾಗಿ 1400 ಎಕರೆ ಭೂಸ್ವಾಧೀನ ಮಾಡುವುದಕ್ಕೆ ಸರಕಾರಕ್ಕೆ ಸಮಸ್ಯೆಯಾಗಿದೆ ಎಂದು ವಿವರಿಸಿದ ಅವರು ನ್ಯಾಯಾಲಯಗಳಲ್ಲಿ ಬಾಕಿ ಇರುವ ರಿಟ್ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಲು ಕ್ರಮವಹಿಸಲಾಗುತ್ತಿದ್ದು, ಇತ್ಯರ್ಥಪಡಿಸಿದ ನಂತರ ಭೂಸ್ವಾಧೀನತೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ಕೊಟ್ಟರು.

ಹಂಚಿಕೆದಾರರು ತಮ್ಮ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಆನ್‌ಲೈನ್ ಅನುಮೋದನೆ ಪಡೆಯಲು ಸೆಂಟರ್ ಫಾರ್ ಇ-ಗವರ್ನನ್ಸ್ ರವರು ಅಗತ್ಯ ತಾಂತ್ರಿಕ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಆರು ತಿಂಗಳ ಕಾಲಾವಧಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ರಾಮಲಿಂಗರೆಡ್ಡಿ ಹೇಳಿದರು.

ಇದನ್ನೂ ಓದಿ:ಸಾಮಾಜಿಕ ಭದ್ರತಾ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೆ ಇಎಸ್‍ಐ, ಪಿಎಫ್ ಸೌಲಭ್ಯ: ಸಚಿವ ಸಂತೋಷ್ ಲಾಡ್

Last Updated : Dec 5, 2023, 7:58 PM IST

ABOUT THE AUTHOR

...view details