ಬೆಳಗಾವಿ: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಆಧುನಿಕ ಉಪಕರಣ ಒದಗಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಅಪರಾಧ ಚಟುವಟಿಕೆ ಮಟ್ಟ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಕಂಗ್ರಾಳಿಯ ಕೆಎಸ್ಆರ್ಪಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ನಾಗರಿಕರನ್ನು ಕಾಪಾಡಿ ಸಮಾಜದ ಸುವ್ಯವಸ್ಥೆ ಕಾಪಾಡುವ ಕೆಲಸ ನಮ್ಮ ಪೊಲೀಸರ ಮೇಲಿದೆ. ನಮ್ಮ ದೇಶದ ಗಡಿಯಲ್ಲಿ ಸೈನಿಕರು ಮಾಡುವ ಕೆಲಸವನ್ನು ಪೊಲೀಸರು ರಾಜ್ಯದಲ್ಲಿ ಮಾಡಲಿದ್ದಾರೆ ಎಂದರು.
ಪೊಲೀಸ್ ಇಲಾಖೆ ಸಿಬ್ಬಂದಿಗೆ ಸಂಬಳದ ವಿಚಾರವಾಗಿ ನಾವು ಯಾವುದೇ ತಾರತಮ್ಯ ಮಾಡಿಲ್ಲ. ಬೇರೆ ಇಲಾಖೆಗೆ ಹೋಲಿಕೆ ಮಾಡಿದರೆ ನಮ್ಮ ಸಿಬ್ಬಂದಿಗೆ ಸಂಬಳ ಕಡಿಮೆ ಮಾಡಿಲ್ಲ. ಜೊತೆಗೆ ಅವರಿಗೆ ಬೇಕಾದ ಸೌಲಭ್ಯಗಳನ್ನು ನಾವು ನೀಡುತ್ತಿದ್ದೇವೆ. ಅವರ ಆರೋಗ್ಯ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.