ಅಥಣಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲಿ 91,734 ಮನೆ ನಿರ್ಮಾಣ ಮಾಡಲಾಗುವುದು ಹಾಗೂ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಾಗುವುದು ಎಂದು ನಿಗಮದ ಅಧ್ಯಕ್ಷ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯನಿರತ ಪತ್ರಕರ್ತರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಜೂನ್ 3 ರಂದು ಅಧಿಕಾರ ವಹಿಸಿಕೊಂಡು ಹಲವು ಬಾರಿ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿದ್ದೇನೆ. ಶೀಘ್ರದಲ್ಲಿ ತಲಾ 5.5 ಲಕ್ಷ ರೂ. ವೆಚ್ಚದ 91,734 ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ 6,500 ಕೋಟಿ ರೂ ವೆಚ್ಚ ತಗಲುತ್ತದೆ. ಇದರಲ್ಲಿ ಕೇಂದ್ರದಿಂದ 1.5 ಲಕ್ಷ ರೂ. ರಾಜ್ಯದಿಂದ 2 ಲಕ್ಷ ರೂ. ಅನುದಾನ ಪಾಲುದಾರಿಕೆಯಿದೆ. ಒಟ್ಟು 350 ಚದರ್ ಮೀ. ಮನೆ ನಿರ್ಮಾಣ ಮಾಡುವ ಈ ಯೋಜನೆ ಸುಮಾರು ಎರಡು ವರ್ಷಗಳಿಂದ ಬಾಕಿ ಇದ್ದು, ಇದೀಗ ಮಂತ್ರಿ ಮಂಡಲದ ಅನುಮತಿ ಸಿಕ್ಕಿರುವುದು ಸಂತಸ ತಂದಿದೆ. ಕೇಂದ್ರದಿಂದ ಸುಮಾರು 500 ರಿಂದ 600 ಕೋಟಿ ರೂ. ಅನುದಾನ ಜಮಾ ಆಗಲಿದೆ. ನನ್ನ ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ವಿ. ಸೋಮಣ್ಣ, ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ, ಸಚಿವರಾದ ರಮೇಶ್ ಜಾರಕಿಹೊಳಿ, ಕೆ.ಎಸ್ ಈಶ್ವರಪ್ಪ ಎಲ್ಲರೂ ತುಂಬಾ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.