ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲೂ ನಾವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಷಯಗಳ ಮೇಲೆ ನಡೆದ ಚರ್ಚೆಯ ವೇಳೆ ಅವರು ಮಾತನಾಡಿ, ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ವೇಳೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ವಿಷಯ ಚರ್ಚೆಯಾಗಬೇಕು ಎನ್ನುವ ಮಾನಸಿಕ ಸ್ಥಿತಿಯಿಂದ ನಾವು ಹೊರ ಬರಬೇಕು. ಅಂತಹ ಮಾನಸಿಕ ತೊಡಕುಗಳು ದೂರಾಗಬೇಕು. ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಸಿಕ್ಕಿದೆ. ಅದರಂತೆ ನಾವು ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದ ವೇಳೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚಿಸಿ ಪರಿಹಾರ ಉಪಾಯ ಕಂಡುಕೊಳ್ಳಬಹುದಾಗಿದೆ ಎಂದು ಸಲಹೆ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿಯಾಗಲಿ: ಉತ್ತರ ಕರ್ನಾಟಕ ಭಾಗದ ದೇವದುರ್ಗ, ರಾಯಚೂರು ಸೇರಿದಂತೆ ಈ ಭಾಗದ ಅನೇಕ ಕಡೆಗಳಲ್ಲಿ ಸಾಕ್ಷರತಾ ಪ್ರಮಾಣವು ಬಹಳಷ್ಟು ಕಡಿಮೆ ಇದೆ. ಇದು ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಕ್ಷರ ಕ್ರಾಂತಿಯಾಗಿದ್ದಲ್ಲಿ ಹೊಸ ಬದಲಾವಣೆ ಕಾಣಬಹುದಾಗಿದೆ ಎಂದು ಸದಸ್ಯರಾದ ಎಚ್.ವಿಶ್ವನಾಥ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಸಾಕ್ಷರತಾ ಪ್ರಮಾಣ ಎಷ್ಟು? ಎಂಬುದಾಗಿ ಪ್ರಶ್ನಿಸಿಕೊಂಡೇ ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಸಾಕ್ಷರತೆ ಇಲ್ಲದೇ ಅಭಿವೃದ್ಧಿಯನ್ನು ನಿರೀಕ್ಷಿಸಲಾಗದು. ವ್ಯಕ್ತಿ ಸಾಕ್ಷರನಾದಾಗ ಮಾತ್ರ ಉತ್ತಮ ವಿವೇಚನೆ ಸಾಧ್ಯವಾಗುತ್ತದೆ. ಈ ಭಾಗದಲ್ಲಿ 15000 ಶಾಲಾ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು.