ಕರ್ನಾಟಕ

karnataka

ETV Bharat / state

ಶತಮಾನದ ಸಂಭ್ರಮದಲ್ಲಿ ಬೆಳಗಾವಿ ಹಿಂಡಲಗಾ ಜೈಲು.. ರಾಜ್ಯದಲ್ಲಿ ಕೈದಿಗಳನ್ನು ನೇಣಿಗೇರಿಸುವ ಏಕೈಕ ಕಾರಾಗೃಹವಿದು..! - ಗಲ್ಲಿಗೇರಿಸುವ ಏಕೈಕ ಕಾರಾಗೃಹ

1923ರಲ್ಲಿ ಬ್ರಿಟಿಷರು ಬೆಳಗಾವಿಯಲ್ಲಿ ಹಿಂಡಲಗಾ ಕಾರಾಗೃಹವನ್ನು 100 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದರು. 24 ಎಕರೆ ವಿಸ್ತೀರ್ಣದಲ್ಲಿ ಕಾರಾಗೃಹದ ಕಟ್ಟಡಗಳಿದ್ದು, ಇನ್ನುಳಿದ 76 ಎಕರೆಯಲ್ಲಿ ಕಬ್ಬು, ಭತ್ತ ಸೇರಿ ಜಾನುವಾರುಗಳಿಗೆ ಮೇವು ಬೆಳೆಯಲಾಗುತ್ತಿದೆ. ಅಪರಾಧಿಗಳಿಗೆ ನೇಕಾರಿಕೆ, ಬೇಕರಿ ತಯಾರಿಕೆ ಮತ್ತು ಟೈಲರಿಂಗ್ ಕೆಲಸದ ಸೌಲಭ್ಯವಿದೆ. 80 ಆಕಳುಗಳು ಇಲ್ಲಿದ್ದು, ಕೈದಿಗಳೇ ಅವುಗಳ ಪಾಲಕರಾಗಿದ್ದಾರೆ.

Belagavi Hindalga Jail
ಬೆಳಗಾವಿ ಹಿಂಡಲಗಾ ಜೈಲು

By

Published : Jul 27, 2023, 8:24 PM IST

Updated : Jul 27, 2023, 9:39 PM IST

ಶತಮಾನದ ಸಂಭ್ರಮದಲ್ಲಿ ಬೆಳಗಾವಿ ಹಿಂಡಲಗಾ ಜೈಲು

ಬೆಳಗಾವಿ:ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು 1923ರಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವು ಶತಮಾ‌ನದ ಸಂಭ್ರಮದಲ್ಲಿದೆ. ದೇಶದ ಎರಡನೇ ಅತೀ ದೊಡ್ಡ ಜೈಲು ಮತ್ತು ಕೈದಿಗಳನ್ನು ಗಲ್ಲಿಗೇರಿಸುವ ರಾಜ್ಯದ ಏಕೈಕ ಕಾರಾಗೃಹ ಎಂಬ ಹೆಗ್ಗಳಿಕೆ ಹಿಂಡಲಗಾ ಜೈಲಿನದ್ದು. ಹೀಗೆ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು.. ಬೆಳಗಾವಿಯಿಂದ ಕೇವಲ 6 ಕಿ ಮೀಟರ್ ದೂರದ ಹಿಂಡಲಗಾ ಎಂಬ ಗ್ರಾಮದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಕಾರಾಗೃಹ ನಿರ್ಮಿಸಲಾಗಿದೆ. 24 ಎಕರೆ ಜಾಗದಲ್ಲಿ ಕಾರಾಗೃಹ ಕಟ್ಟಡ ಆವರಿಸಿದ್ದು, ಇನ್ನುಳಿದ 76 ಎಕರೆಯಲ್ಲಿ ಕಬ್ಬು, ಭತ್ತ ಸೇರಿ ಇಲ್ಲಿನ ಜಾನುವಾರುಗಳಿಗೆ ಮೇವು ಬೆಳೆಯಲಾಗುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಜೈಲಿನ ವಿವಿಧ ವಿಭಾಗಗಳ ನಡುವೆ ಬೆಳೆದು ನಿಂತಿರುವ ಮರಗಳು ಮತ್ತು ವಿವಿಧ ಸಸ್ಯವರ್ಗ ಎಲ್ಲರನ್ನು ಆಕರ್ಷಿಸುತ್ತದೆ. ಹಸಿರು ಸಂಪತ್ತಿನ ಸಂರಕ್ಷಣೆಯಲ್ಲೂ ಸಿಬ್ಬಂದಿ ಮತ್ತು ಕೈದಿಗಳ ಪಾತ್ರ ಪ್ರಮುಖವಾಗಿದೆ. 80 ಆಕಳುಗಳು ಇಲ್ಲಿದ್ದು, ಕೈದಿಗಳು ಅವುಗಳ ಪಾಲಕರಾಗಿದ್ದಾರೆ.

1,162 ಕೈದಿಗಳನ್ನು ಇರಿಸುವ ಸಾಮರ್ಥ್ಯ:ಎರಡು ದೊಡ್ಡ ಸಂಕೀರ್ಣಗಳನ್ನು ಜೈಲು ಒಳಗೊಂಡಿದೆ. ಒಂದು ಸಂಕೀರ್ಣದಲ್ಲಿ ಪುರುಷ ಅಪರಾಧಿಗಳಿಗೆ ಬ್ಯಾರಕ್‌ಗಳನ್ನು ಅಳವಡಿಸಲಾಗಿದೆ. ವಿಚಾರಣಾಧೀನ ಕೈದಿಗಳಿಗೆ ಇನ್ನೊಂದು ಸಂಕೀರ್ಣ ಬಳಸಲಾಗುತ್ತಿದೆ. ಅಪರಾಧಿಗಳಿಗೆ ದಿನ ನಿತ್ಯ ನೇಕಾರಿಕೆ, ಬೇಕರಿ ತಯಾರಿಕೆ ಮತ್ತು ಟೈಲರಿಂಗ್ ಕೆಲಸದ ಸೌಲಭ್ಯವಿದೆ. ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್‌ಗಳು ಮತ್ತು ಬ್ಯಾರಕ್‌ಗಳಿವೆ. ಇಲ್ಲಿ ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಇದೆ. ಹೆಚ್ಚಿನ ಭದ್ರತೆ ಇರುವ ಕೈದಿಗಳಿಗಾಗಿ ಕೆಲವು ವಿಶೇಷ ಕೋಣೆಗಳು ಸಹ ಇವೆ.

ಈ ಜೈಲಿನಲ್ಲಿ 1,162 ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. 935 ಕೈದಿಗಳು ಸದ್ಯ ಬಂಧಿಯಾಗಿದ್ದಾರೆ. ಅದರಲ್ಲಿ 897 ಪುರುಷ ಮತ್ತು 38 ಮಹಿಳಾ ಕೈದಿಗಳಿದ್ದಾರೆ. ಕೈದಿಗಳಿಗೆ ಧ್ಯಾನ ಮಂದಿರವಿದೆ. ಬಾಲ ಅಪರಾಧಿಗಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ಕೈದಿಗಳ ಮನಪರಿವರ್ತನೆಗಾಗಿ ಆಗಾಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಪರಾಧಿಗಳು ಮುಕ್ತರಾಗಿ ಜೈಲಿನಿಂದ ಹೊರಗಡೆ ಹೋದ ಬಳಿಕ ಒಳ್ಳೆಯ ನಾಗರಿಕರಾಗಿ ಬದುಕುವಂತೆ ಪ್ರೇರೇಪಿಸುತ್ತಿದ್ದೇವೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ತಿಳಿಸಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲು

ಗಲ್ಲಿಗೇರಿಸುವ ಏಕೈಕ ಕಾರಾಗೃಹ, 41 ಕೈದಿ ಇಲ್ಲಿ ನೇಣಿಗೆ:ಜೈಲು ಅಧಿಕಾರಿಗಳ ಪ್ರಕಾರ ಸದ್ಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 27 ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿದ್ದಾರೆ. ಹಿಂದಿನಿಂದಲೂ ಕರ್ನಾಟಕದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಹಿಂಡಲಗಾದಲ್ಲಿ ಇರಿಸಲಾಗುತ್ತದೆ. ಮುಖ್ಯವಾಗಿ ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಬೆಳಗಾವಿ ಹಿಂಡಲಗಾ ಕಾರಾಗೃಹ ಪಾತ್ರವಾಗಿದ್ದು,‌ ಈ ವರೆಗೆ 41 ಕೈದಿಗಳನ್ನು ಇಲ್ಲಿ ನೇಣಿಗೇರಿಸಲಾಗಿದೆ. ಇಲ್ಲಿ ಮೂರು ಸ್ಥಳಗಳಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ.

ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್‌ನ ಹನುಮಪ್ಪ ಮರಿಯಾಲ ನವೆಂಬರ್ 9, 1983. ಅದಕ್ಕೂ ಮೊದಲು, ಆರು ಜನರನ್ನು 1976 ರಲ್ಲಿ ಮತ್ತು ಐವರನ್ನು 1978 ರಲ್ಲಿ ಗಲ್ಲಿಗೇರಿಸಲಾಯಿತು. ಹಿಂಡಲಗಾ ಜೈಲಿನಲ್ಲಿ ನಾಲ್ವರು ವೀರಪ್ಪನ್ ಗ್ಯಾಂಗ್ ಸದಸ್ಯರು ಸೇರಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಹಲವಾರು ಅಪರಾಧಿಗಳು ಇದ್ದಾರೆ. ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿ ಸೇರಿದಂತೆ ಕುಖ್ಯಾತ ರೌಡಿಗಳು ಮತ್ತು ಶಂಕಿತ ಸಿಮಿ ಕಾರ್ಯಕರ್ತರು, ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ ಸಹ ಈ ಜೈಲಿನಲ್ಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಜೈಲು:ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳವಳಿ ಮತ್ತು ದಂಡಿ ಮಾರ್ಚ್ ಚಳವಳಿಯ ಸಂದರ್ಭದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಿದ್ದರು. ಪಿಕೆಟಿಂಗ್ ರೈಲ್ವೆ ಹಳಿಗಳನ್ನು ಕಿತ್ತು ಪ್ರತಿಭಟನೆ ಮಾಡಿದ್ದ ಮೈಲಾರ ಮಹಾದೇವಪ್ಪ, ಅಂದಾನಪ್ಪ ದೊಡ್ಡಮೇಟಿ, ಮಹಾದೇವ ದೇಸಾಯಿ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸ್​ ಭಾಂಡಗೆ, ಹಳದಾಳ್ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚನ್ನಬಸಪ್ಪ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ಇದೇ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು.

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ’’ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿಂಡಲಗಾ ಜೈಲಿಗೆ ಐತಿಹಾಸಿಕ ಹಿನ್ನೆಲೆಯಿದ್ದು, ಇಡೀ ರಾಜ್ಯದಲ್ಲೆ ಇದೊಂದು ಅಪರೂಪದ ಮಾದರಿ ಜೈಲು‘‘ ಎಂದು ಬಣ್ಣಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ರಾಜೇಂದ್ರ ಕಲಘಟಗಿ ಹೇಳಿದ್ದಿಷ್ಟು:ಇನ್ನು ಈ ವೇಳೆ ಜೈಲು ಶಿಕ್ಷೆ ಅನುಭವಿಸಿದ್ದ ಬೆಳಗಾವಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ರಾಜೇಂದ್ರ ಕಲಘಟಗಿ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ಕರೆ ನೀಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿನ್ನೆಲೆ 1943 ಏಪ್ರಿಲ್ 27 ರಿಂದ ನವೆಂಬರ್ 26 ರ ವರೆಗೆ ಏಳು ತಿಂಗಳು ನಾನು ಹಿಂಡಲಗಾ ಜೈಲಿನಲ್ಲಿದ್ದೆನು. ನನ್ನ ಜೊತೆ ಸಿದ್ದಪ್ಪ ಹೊನಗೇಕರ್, ಬೆಳಗಾವಿ ತಾಲೂಕಿನ ಬಡಸದ ಬಿ.ಆರ್.ಪಾಟೀಲ, ಸಂಪಗಾವಿ ವಾಲಿ ಚನ್ನಪ್ಪ, ಬೈಲಹೊಂಗಲದ ಬಸವರಾಜ ಬಿಸನಕೊಪ್ಪ, ದೊಡ್ಡವಾಡದ ಎಸ್.ಎಸ್. ಕತ್ತಿ ಸೇರಿ ಸುಮಾರು 200ಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅಂತಾರಾಷ್ಟ್ರೀಯ ಕ್ರಿಮಿನಲ್​ ಚಾರ್ಲ್ಸ್ ಶೋಭರಾಜ್ ಕೂಡ ಇದ್ದರು ಎಂದು ಹೇಳಿದರು.

ಸಾಹಿತಿ ದ ರಾ ಬೇಂದ್ರೆ, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಬಂಧಿಯಾಗಿದ್ದ ಜೈಲು: ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಕವಿತೆ ಬರೆದಿದ್ದರಿಂದ ವರಕವಿ ದ.ರಾ. ಬೇಂದ್ರೆ ಅವರನ್ನು ಕೂಡ ಬಂಧಿಸಿ ಇದೇ ಜೈಲಿನಲ್ಲಿ ಇಡಲಾಗಿತ್ತು.‌ ಇನ್ನು ವೀರ್​ ಸಾವರ್ಕರ್ ಅವರು 1950 ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು. ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ ವಿರೋಧಿಸಿದ್ದ ಪ್ರಕರಣದಲ್ಲಿ ವೀರ ಸಾವರ್ಕರ್ ಅವರನ್ನು ಕೂಡ ಬಂಧಿಸಿ ಇಡಲಾಗಿತ್ತು.

ಇನ್ನು ಕರ್ನಾಟಕ ಏಕೀಕರಣದ ಸಾಕಷ್ಟು ಹೋರಾಟಗಾರರನ್ನು ಇದೇ ಜೈಲಿನಲ್ಲಿಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ರಾಮಕೃಷ್ಣ ಹೆಗಡೆ ಸೇರಿ ಅನೇಕರು ಇಲ್ಲಿಯೇ ಬಂಧಿಯಾಗಿದ್ದರು. ಚಿತ್ರನಟ ದಿ. ಶಂಕರನಾಗ ಮತ್ತು ಅನಂತನಾಗ ಅಭಿನಯದ ‘ಮಿಂಚಿನ ಓಟ’ ಕನ್ನಡ ಸಿನಿಮಾ ಮತ್ತು ಹಿಂದಿಯ ‘ಮೊಹ್ರಾ’ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ಹಿಂಡಲಗಾ ಜೈಲಿನಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂಓದಿ:Brand Bengaluru: ಬ್ರ‍್ಯಾಂಡ್ ಬೆಂಗಳೂರು ಕುರಿತ ಪ್ರಮುಖ ಶಿಫಾರಸುಗಳು ಶೀಘ್ರವೇ ಕಾರ್ಯರೂಪಕ್ಕೆ: ಬಿಬಿಎಂಪಿ ವಿಶೇಷ ಆಯುಕ್ತ

Last Updated : Jul 27, 2023, 9:39 PM IST

ABOUT THE AUTHOR

...view details