ಬೆಳಗಾವಿ: ಇಂದು ಬೆಳಗ್ಗೆ ಜಿಲ್ಲೆಯ ಪೊಲೀಸರಿಂದ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಮಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ದಾಳಿ ನಡಸಿದ್ದಾರೆ. 2 ಸಾವಿರ ಮುಖ ಬೆಲೆಯ ಒಟ್ಟು 2 ಕೋಟಿ ರೂ. ಕಂತೆ ಕಂತೆ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೆಳಗಾವಿ ಡಿಸಿ ನಿತೇಶ ಪಾಟೀಲ್, ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂದಿನ ತನಿಖೆಯನ್ನು ಹಿರೇಬಾಗೇವಾಡಿ ಪೊಲೀಸರು ಕೈಗೊಂಡಿದ್ದಾರೆ.
ಖಾನಾಪುರ: ಸೂಕ್ತ ದಾಖಲೆ ಇಲ್ಲದೇ ಚಿನ್ನ, ಬೆಳ್ಳಿ ಆಭರಣಗಳನ್ನು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿರುವ ನಂದಗಡ ಠಾಣೆಯ ಪೊಲೀಸರು 53.33 ರೂ. ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ ಹಾಗೂ 19,08,420 ರೂ ಮೌಲ್ಯದ 28.065 ಕೆಜಿ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದ್ದು, ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೇ ಕಾರಿನಲ್ಲಿ ಆಭರಣಗಳನ್ನು ಸಾಗಿಸಲಾಗುತ್ತಿತ್ತು. ಚಿನ್ನ, ಬೆಳ್ಳಿ ಆಭರಣ ಜೊತೆಗೆ 13 ಲಕ್ಷ ರೂ. ಮೌಲ್ಯದ ಕಾರು ಸೇರಿ 53,33,724 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಕ್ಷೇತ್ರದಲ್ಲಿ ತಪಾಸಣೆ ವೇಳೆ ಈ ವಸ್ತುಗಳು ಪತ್ತೆಯಾಗಿವೆ. ಹಳಿಯಾಳ ಮೂಲದ ಧರ್ಮರಾಜ್ ಕುಟ್ರೆ ಎಂಬಾತನನ್ನು ಬಂಧಿಸಿರುವ ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.