ಬೆಳಗಾವಿ: ತಾಲೂಕಿನ ಹಿರೇಬಾಗೆವಾಡಿ ಟೋಲ್ ನಾಕಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಲಾರಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಟೋಲ್ ನಾಕಾದವರು ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಮೃತನ ಕುಟುಂಬಸ್ಥರು, ಗ್ರಾಮಸ್ಥರು ಹಿರೇಬಾಗೆವಾಡಿ ಟೋಲ್ ನಾಕಾಗೆ ನಿನ್ನೆ ಮುತ್ತಿಗೆ ಹಾಕಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಹಿರೇಬಾಗೆವಾಡಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠ (44) ಮೃತ ವ್ಯಕ್ತಿ. ಕುಟುಂಬಸ್ಥರು ಹೇಳುವ ಪ್ರಕಾರ, ಕಳೆದ ಹಲವು ವರ್ಷಗಳಿಂದ ವಿರೂಪಾಕ್ಷ ಹಿರೇಬಾಗೆವಾಡಿ ಟೋಲ್ ನಾಕಾದಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಟೋಲ್ಗೆ ಬಂದಿದ್ದ ಲಾರಿ ವಾಹನದ ತೂಕ ಚೆಕ್ ಮಾಡುವ ಸಂದರ್ಭದಲ್ಲಿ ಲಾರಿ ವಾಹನದ ಚಾಲಕ ವಾಹನ ಸಮೇತ ಪರಾರಿ ಆಗಲು ಯತ್ನಿಸಿದ್ದಾನೆ. ಈ ವೇಳೆ, ವಾಹನ ಚಾಲಕನನ್ನು ಹಿಡಿಯಲು ಪ್ರಯತ್ನಿಸಿದಾಗ ಆಯ ತಪ್ಪಿ ಲಾರಿ ಚಕ್ರದಲ್ಲಿ ವಿರೂಪಾಕ್ಷಯ್ಯ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದಾನೆ.
ಆದ್ರೆ, ಟೋಲ್ ನಾಕಾ ಅಧಿಕಾರಿಗಳು ವಿರೂಪಾಕ್ಷಯ್ಯ ಸಾವಿನ ಪ್ರಕರಣದಿಂದ ನುಣುಚಿಕೊಳ್ಳುವ ಸಲುವಾಗಿ ವಿರೂಪಾಕ್ಷಯ್ಯ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ಆಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.