ಬೆಳಗಾವಿ:ಅತ್ಯಾಚಾರ, ಕೊಲೆ, ಡಕಾಯಿತಿಯಲ್ಲಿ ತೊಡಗಿ ಮರಣದಂಡನೆ ಶಿಕ್ಷೆಗೆ ಒಳಗಾಗುವ ಆರೋಪಿತರಿಗೆ ಗಲ್ಲಿಗೇರಿಸುವ ವ್ಯವಸ್ಥೆ ರಾಜ್ಯದಲ್ಲಿರುವುದು ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮಾತ್ರ. ಹಿಂಡಲಗಾ ಹೊರತುಪಡಿಸಿದ್ರೆ ರಾಜ್ಯದ ಬೇರೆ ಯಾವ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸುವ ವ್ಯವಸ್ಥೆಯಿಲ್ಲ. ಹೀಗಾಗಿ ಹಿಂಡಲಗಾ ಕೇಂದ್ರ ಕಾರಾಗೃಹ ರಾಜ್ಯದ ಹಳೆಯ ಹಾಗೂ ಪ್ರಮುಖ ಜೈಲಾಗಿದೆ.
1923 ರಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹ ಆರಂಭವಾಗಿದೆ. ಅಂದಿನಿಂದ ಇಂದಿನವರೆಗೆ ಸುಮಾರು 39 ಮರಣದಂಡನೆ ಶಿಕ್ಷೆಗೆ ಒಳಗಾದ ಆರೋಪಿತರಿಗೆ ಇಲ್ಲಿ ಗಲ್ಲಿಗೇರಿಸಲಾಗಿದೆ. ಇಲ್ಲಿ ಕೊನೆಯದಾಗಿ ಗಲ್ಲಿಗೇರಿಸಿದ್ದು 1983 ರಲ್ಲಿ. ಆದ್ರೆ ಗಲ್ಲುಶಿಕ್ಷೆಗೆ ಗುರಿಯಾದ ಆರೋಪಿತರು ಇಲ್ಲಿ ಸಾಕಷ್ಟು ಜನರಿದ್ದಾರೆ.
ವಿಕೃತಕಾಮಿ ಉಮೇಶ್ರೆಡ್ಡಿ ಮೇಲೆ ಕಣ್ಣು...
ಕೊಲೆ ಆರೋಪದಡಿ ವಿಕೃತಕಾಮಿ ಉಮೇಶ್ ರೆಡ್ಡಿಗೂ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಉಮೇಶ್ ರೆಡ್ಡಿಯನ್ನು ಬೆಂಗಳೂರಿನಿಂದ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ರಾಷ್ಟ್ರಪತಿಗಳು ರೆಡ್ಡಿ ಕ್ಷಮಾದಾನ ಅರ್ಜಿ ವಜಾ ಮಾಡಿದ್ದರಿಂದ ಆತನನ್ನು ಗಲ್ಲಿಗೇರಿಸಲು ಕಳೆದ ವರ್ಷ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ಹೈಕೋರ್ಟ್ ಗಲ್ಲಿಗೇರಿಸುವುದಕ್ಕೆ ಮಧ್ಯಂತರ ತಡೆ ನೀಡಿದೆ.
ಇನ್ನು ವಿಜಯಪುರದ ರೂಢಗಿ ಗ್ರಾಮದಲ್ಲಿ ನಡೆದ 19 ಜನರ ಸಜೀವ ದಹನ ಪ್ರಕರಣದ 6 ಜನ ಆರೋಪಿತರಿಗೆ 1976 ರಲ್ಲಿ ಗಲ್ಲಿಗೇರಿಸಲಾಗಿತ್ತು. ವಿಜಯಪುರದ ಅಟ್ಯಾಲಟ್ಟಿ ಗ್ರಾಮದಲ್ಲಿ ಯುವತಿಯನ್ನು ಚುಡಾಯಿಸಿದ ಆರು ಜನರನ್ನು ಕೊಲೆಗೈದ ಆರೋಪದಡಿ 1975ರಲ್ಲಿ ಐವರಿಗೆ ಹಿಂಡಲಗಾ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.