ಬೆಳಗಾವಿ:ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರು ಹೊಡೆದಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಉತ್ತರ ವಲಯದ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಆದೇಶ ಹೊರಡಿಸಿದ್ದಾರೆ. ಹಿರಿಯ ವೀಕ್ಷಕ ಬಿ.ಎಲ್.ಮೆಳವಂಕಿ, ವೀಕ್ಷಕ ವಿ.ಟಿ.ವಾಘಮೋರೆ ಅಮಾನತುಗೊಂಡವರು. ಇಬ್ಬರು ಕೈದಿಗಳ ಮಧ್ಯೆ ಗಲಾಟೆ ನಡೆಯದಂತೆ ನೋಡಿಕೊಳ್ಳುವಲ್ಲಿ ಸಿಬ್ಬಂದಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಹಾಗಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ:ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಸಾಯಿಕುಮಾರ್ ಮತ್ತು ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಂಕರಪ್ಪ ಕೊರವರ ಮಧ್ಯೆ ಜುಲೈ 29ರಂದು ಗಲಾಟೆ ನಡೆದಿತ್ತು. ಮಂಡ್ಯ ಮೂಲದ ಸಾಯಿಕುಮಾರ್‌ಗೆ ಶಂಕರಪ್ಪ ಕೊರವರ ಬಲವಾಗಿ ಹಲ್ಲೆ ಮಾಡಿದ್ದ. ಸ್ಕ್ರೂಡ್ರೈವರ್‌ನಿಂದ ಎದೆಗೆ ಐದು ಬಾರಿ ಚುಚ್ಚಿದ್ದ. ಸಾಯಿಕುಮಾರ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಮರು ಹೊಡೆತದಿಂದ ಶಂಕರಪ್ಪ ಕೂಡಾ ಗಾಯಗೊಂಡಿದ್ದ. ಇಬ್ಬರೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆ ಮುಂದೆ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಹಿಂಡಲಗಾ ಜೈಲಿನಲ್ಲಿ ನಡೆದಿದ್ದ ಈ ಗಲಾಟೆ ತೀವ್ರ ಟೀಕೆಗೆ ಗ್ರಾಸವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.