ಹುಬ್ಬಳ್ಳಿ/ಬೆಳಗಾವಿ: ಉಡುಪಿ ಹಾಗೂ ಕುಂದಾಪುರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪ್ರವೇಶಿಸಲು ವಿದ್ಯಾರ್ಥಿಗಳಿಗೆ ನಿರಾಕರಿಸಿದ್ದು ಖಂಡನೀಯ. ಈ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಆನುಮತಿ ನೀಡಬೇಕು. ಇಲ್ಲವಾದರೆ ಹುಬ್ಬಳ್ಳಿಯಿಂದ ಉಡುಪಿಗೆ ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಮುಖಂಡರು, ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.
ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಲು ನಿರ್ಬಂಧ ಹೇರಿರುವುದು ಕಾಲೇಜಿನ ಆಡಳಿತ ಮಂಡಳಿ ಹಾಗೂ ಕರ್ನಾಟಕ ಸರ್ಕಾರದ ನಡವಳಿಕೆ ಇಸ್ಲಾಂ ಧರ್ಮದ ವಿರುದ್ಧವಾಗಿದೆ. ಪದೇ ಪದೆ ನಮ್ಮ ಮೇಲೆ ಆರೋಪ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಬೇಸರ ತಂದಿದೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಹಕ್ಕಾಗಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಹಿಜಾಬ್ ಎಂಬುದು ಹೆಣ್ಣುಮಕ್ಕಳ ಆಭರಣ. ಇದು ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಾವು ಭಾರತದ ಪ್ರಜೆಯಾಗಿದ್ದು, ಇಲ್ಲಿಯೇ ಇರುತ್ತೇವೆ.
ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಭಾರತದ ಮೇಲೆ ನಮಗೆ ಅಪಾರ ಗೌರವ, ವಿಶ್ವಾಸವಿದೆ. ಆದರೆ, ಈ ವಿವಾದ ನೋಡಿದರೆ 'ಬೇಟಿ ಬಚಾವೋ, ಬೇಟಿ ಪಡಾವೋ ಸುಳ್ಳು' ಎನಿಸುತ್ತಿದೆ ಎಂದರು. ಉಡುಪಿ ಹಾಗೂ ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳಿಗೆ 3 ದಿನದಲ್ಲಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.