ಬೆಳಗಾವಿ: ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ರಾಜ್ಯ, ದೇಶದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಇಂದು ಮಧ್ಯಾಹ್ನ ಕೋವಿಡ್ ಸಂಬಂಧ ಉನ್ನತ ಮಟ್ಟದ ತಜ್ಞರ ಸಭೆ ನಡೆಯಲಿದ್ದು, ಕೊರೊನಾ ಜಾಗೃತಿ ಹಾಗೂ ಬೂಸ್ಟರ್ ಡೋಸ್ ಕಡ್ಡಾಯ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರದ ರೀತಿ ಕೆಲವು ನಿಯಮಗಳನ್ನ ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಯಾವ ವಿಚಾರವನ್ನು ಕೂಡ ಚರ್ಚೆ ಮಾಡಲು ನಾವು ಸಿದ್ಧ. ಮಧ್ಯಾಹ್ನ ದೆಹಲಿಗೆ ಹೋಗ್ತಿದ್ದೇನೆ, ಕಳೆದ ಬಾರಿ ಹೋದಾಗ ಸಭೆಗಳು ಅಪೂರ್ಣ ಆಗಿದ್ದವು. ಈ ಬಾರಿ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಚುನಾವಣಾ ತಯಾರಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲಾಗುವುದು. ಸಾಧ್ಯವಾದರೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.