ಬೆಂಗಳೂರು:ನಗರದಲ್ಲಿರುವ ಕೈಗಾರಿಕಾ ನ್ಯಾಯಾಧೀಕರಣ (ಕಾರ್ಮಿಕ ನ್ಯಾಯಾಲಯ) ದ ಪೀಠಾಸೀನಾಧಿಕಾರಿಯ ನೇಮಕಾತಿ ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಮುಂದಿನ ಮೂರು ವಾರಗಳಲ್ಲಿ ಈ ಸಂಬಂಧ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ 10 ಲಕ್ಷ ರೂ ದಂಡ ತೆತ್ತಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಈ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಕೈಗಾರಿಕಾ ನ್ಯಾಯಾಧೀಕರಣಕ್ಕೆ 2022ರ ಆ.18ರಂದು ಪೀಠಾಸೀನಾಧಿಕಾರಿಯಾಗಿ ಒಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರು ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ ಹೊಸ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆ ಪ್ರಕ್ರಿಯೆ ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಹಂತದಲ್ಲಿದೆ. ಎರಡು ವಾರ ಕಾಲಾವಕಾಶ ಕೊಟ್ಟರೆ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಳೆದ ಮೂರು ವರ್ಷಗಳಿಂದ ಪೀಠಾಸೀನಾಧಿಕಾರಿ ಹುದ್ದೆ ಖಾಲಿ ಇದೆ. ಈ ರೀತಿ ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಗಳ ಹುದ್ದೆಗಳನ್ನು ದೀರ್ಘಕಾಲದವರಿಗೆ ಖಾಲಿ ಬಿಟ್ಟರೆ ನ್ಯಾಯ ಪಡೆಯಬಯಸುವವರಿಗೆ ಅದರಿಂದ ವಂಚಿತರನ್ನಾಗಿ ಮಾಡಿದಂತೆ. 'ಎಲ್ಲರಿಗೂ ನ್ಯಾಯ'ದ ಉದ್ದೇಶಕ್ಕೆ ಇದು ಅಡ್ಡಿಯಾಗಲಿದೆ. ಈ ರೀತಿಯ ವಿಳಂಬ ನಿರ್ದಿಷ್ಟ ಕ್ಷೇತ್ರದ ನ್ಯಾಯ ಅಪೇಕ್ಷಿತರ ಕನಸು ಕನಸಾಗಿಯೇ ಉಳಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ 'ಮೌನ ಪ್ರೇಕ್ಷಕ' ಆಗಬಾರದು ಎಂದು ಹೈಕೋರ್ಟ್ ಚಾಟಿ ಬೀಸಿತು.
ಅಲ್ಲದೇ, ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ಹೇಳುತ್ತಿದ್ದಾರೆ. ಇದು ಕಣ್ಣೊರೆಸುವ ತಂತ್ರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕ್ರಮ ಕೈಗೊಳ್ಳುವ ಬದಲು 'ಕಾಗದದ ಮೇಲೆ ಕುದರೆ ಓಡಿಸುವುದರಲ್ಲಿ' ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದಂತಿದೆ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಇಷ್ಟಾದ ಮೇಲೆ ಕೇಂದ್ರ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಗಲಿದೆ ಎಂಬ ವಿಶ್ವಾಸವಿದೆ. ಒಂದೊಮ್ಮೆ ವಿಫಲವಾದಲ್ಲಿ 10 ಲಕ್ಷ ರೂ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಸಕಾರಾತ್ಮಕ ಕ್ರಮ ಕೈಗೊಳ್ಳುವಂತೆ ಮೂರು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತು.
ಇದನ್ನೂ ಓದಿ: ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆ, ಆದೇಶ, ತೀರ್ಪು ವೆಬ್‌ಹೋಸ್ಟ್ ಮಾಡಲು ಬಿಬಿಎಂಪಿಗೆ ಗಡುವು