ಬೆಳಗಾವಿ/ಹುಬ್ಬಳ್ಳಿ/ಗದಗ: ಇಂದು ಅಯೋಧ್ಯೆ ವಿವಾದದ ತೀರ್ಪು ಹೊರಬೀಳಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಬೆಳಗಾವಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಇಬ್ಬರು ಡಿಸಿಪಿ, 5 ಜನ ಎಸಿಪಿ, 21 ಜನ ಸಿಪಿಐ, 1200 ಪೊಲೀಸ್ ಸಿಬ್ಬಂದಿ, 5 ಕೆಎಸ್ಆರ್ಪಿ, 10 ಸಿಎಆರ್, 300 ಜನ ಹೋಂಗಾರ್ಡ್ ನಿಯೋಜನೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ನಗರದ ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿದೆ. ಶಹಾಪುರ್, ಅನಗೋಳ, ಗಾಂಧಿನಗರ, ಕಂಜರ ಗಲ್ಲಿ, ಟಿಪ್ಪು ನಗರ, ಜಾಲಗಾರ ಗಲ್ಲಿ, ಮಾರ್ಕೆಟ್ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಹಾವೇರಿ ಜಿಲ್ಲೆಯಾದ್ಯಂತ ಕೂಡ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಹಾವೇರಿ ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ 700 ಜನ ನಾಗರಿಕ ಪೊಲೀಸ್, 10 ಡಿಆರ್ ಪಡೆ, ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಸಹ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ನಗರದಲ್ಲಿ 20 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ರೌಡಿಶೀಟರ್‌ಗಳ ಮೇಲೆ, ಕೋಮುಭಾವನೆ ಕೆರಳಿಸುವ ವ್ಯಕ್ತಿಗಳ ಮೇಲೆ ಖಾಕಿ ಪಡೆ ಕಣ್ಣಿಟ್ಟಿದೆ.
ಗದಗ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಅಯೋಧ್ಯೆ ತೀರ್ಪು ಹೊರ ಬಂದ ಬಳಿಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶದಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಓಡಾಡಬಾರದು ಎಂದು ಸೂಚನೆ ನೀಡಲಾಗಿದ್ದು, ಜಿಲ್ಲೆಯ ಹಲವು ಕೇಬಲ್ ನೆಟ್ವರ್ಕ್ ಕೂಡ ಕಡಿತಗೊಳಿಸಲಾಗಿದೆ.