ಅಥಣಿ : 2019ರಲ್ಲಿ ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ಹಾಗೂ ತಾಲೂಕಿನಲ್ಲಿ ಇನ್ನಿತರ ವಿದ್ಯುತ್ ಇಲಾಖೆ ಕಾಮಗಾರಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪದಡಿ 20 ಅಧಿಕಾರಿಗಳನ್ನ ಅಮಾನತು ಮಾಡಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪ್ರಧಾನ ವ್ಯವಸ್ಥಾಪಕ ಬಿ ವಿ ಬೆಳಗಲಿ ಆದೇಶ ಹೊರಡಿಸಿದ್ದಾರೆ.
ವಿದ್ಯುತ್ ಇಲಾಖೆಗೆ ತಪ್ಪಾದ ಲೆಕ್ಕವನ್ನು ಕೊಟ್ಟು ಹಾಗೂ ಕಾಮಗಾರಿ ವೆಚ್ಚದಲ್ಲಿ ಹೆಚ್ಚು ಮಾಡಿ, ಕಾಮಗಾರಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಹಾಗೆಯೇ, ಲೆಕ್ಕದ ಪುಸ್ತಕಗಳನ್ನು ತಿರುಚಿರಬಹುದಾದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2018ರಿಂದ ಆಗಸ್ಟ್ 2019ರ ಅವಧಿಯಲ್ಲಿ ನಡೆದ ಭಾರಿ ಭ್ರಷ್ಟಾಚಾರವನ್ನು ರೈತ ಮುಖಂಡರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 14/9/2021ರಂದು ಅಥಣಿ ವಿಭಾಗಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ, ಕಾಮಗಾರಿಗಳ ಪರಿಶೀಲನೆ ನಡೆಸಿ ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆ, ಅರ್ಧದಷ್ಟು ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹೆಸ್ಕಾಂ ಕಂಪನಿಗೆ ಅಧಿಕಾರಿಗಳು ದಾಖಲಾತಿಗಳನ್ನು ಸಲ್ಲಿಸಿದ್ದರು.