ಬೆಳಗಾವಿ :ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿ, ಬೆಳಗುಂದಿ, ರಕ್ಕಸಕೊಪ್ಪ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿ, ಬೆಳಗುಂದಿ, ರಕ್ಕಸಕೊಪ್ಪ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಅಪಾರ ಪ್ರಮಾಣದ ನೀರನ್ನ ಹೊರಗೆ ಹರಿಸಲಾಗ್ತಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ಕೂಡ ಅಧಿಕವಾಗಿದೆ. ಹೀಗಾಗಿ, ಇಂದು ಬೆಳಗ್ಗೆ ಕೋಯ್ನಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕೋಯ್ನಾ ಜಲಾಶಯದ ಅಧಿಕಾರಿಗಳು ಈ ಸಂಬಂಧ ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಕೋಯ್ನಾ ಜಲಾಶಯದ 8 ಗೇಟ್ ತೆರೆದು ನೀರು ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಕೆಲ ಹೊತ್ತಿನ ಬಳಿಕ ಅದನ್ನ 20 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಆಗ್ತಿದ್ದಂತೆ ಕೃಷ್ಣಾ ನದಿ ತೀರದಲ್ಲಿ ಆತಂಕ ಶುರುವಾಗಿದೆ. ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಇಳಿಮುಖವಾದರೆ ಇಲ್ಲಿನ ಜನರಲ್ಲಿ ಆತಂಕ ಕಡಿಮೆ ಆಗುತ್ತದೆ. ಇಲ್ಲವಾದರೆ ಈ ವರ್ಷವೂ ಗಡಿ ಜಿಲ್ಲೆ ಜನರು ಪ್ರವಾಹದ ಸಂಕಷ್ಟ ಅನುಭವಿಸಬೇಕಾಗುತ್ತದೆ.