ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮಳೆ: ಸೇತುವೆ, ರಸ್ತೆಗಳು ಜಲಾವೃತ.. ಶಾಸಕಿ ನಿಂಬಾಳ್ಕರ್ ಭೇಟಿ, ಪರಿಶೀಲನೆ - state rain

ಮುಂದುವರಿದ ಧಾರಾಕಾರ ಮಳೆ-ಸೇತುವೆ, ರಸ್ತೆಗಳು ಜಲಾವೃತ-ಭರ್ತಿಯಾಗುವ ಹಂತಕ್ಕೆ ತಲುಪಿದ ರಕ್ಕಸಕೊಪ್ಪ ಜಲಾಶಯ-ಪ್ರವಾಹದ ಭೀತಿಯಲ್ಲಿ ಜನತೆ

heavy rain leads to problem in belagavi
ಬೆಳಗಾವಿಯಲ್ಲಿ ಮಳೆ

By

Published : Jul 17, 2022, 8:04 PM IST

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರಿದ ಧಾರಾಕಾರ ಮಳೆಗೆ ರಕ್ಕಸಕೊಪ್ಪ ಜಲಾಶಯ ಭರ್ತಿಯಾದ ಹಿನ್ನೆಲೆ ಮೂರು ಗೇಟ್‌ಗಳಿಂದ ಸಣ್ಣ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯ ಭರ್ತಿಗೆ ಎರಡು ಅಡಿ ಬಾಕಿ ಇದ್ದು, ಸದ್ಯ ಮೂರು ಗೇಟ್​ಗಳಿಂದ ಮಾರ್ಕಂಡೇಯ ನದಿಗೆ ನೀರು ಬಿಡುಗಡೆ ಮಾಡಿದ್ದಾರೆ. ರಕ್ಕಸಕೊಪ್ಪ ಜಲಾಶಯದ ಮಟ್ಟ- 2,475 ಅಡಿ ಇದ್ದು, ಇಂದಿನ ಮಟ್ಟ 2,473 ಅಡಿ ಇದೆ. ನೀರು ಬಿಟ್ಟ ಹಿನ್ನೆಲೆ, ಮಾರ್ಕಂಡೇಯ ನದಿ ತೀರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಬೆಳಗಾವಿಯಲ್ಲಿ ಮಳೆ ಅವಾಂತರ

13 ಸೇತುವೆಗಳು ಜಲಾವೃತ: ಜಿಲ್ಲೆಯ ಕೆಳಹಂತದ 13 ಸೇತುವೆಗಳು ಜಲಾವೃತವಾಗಿವೆ. ಪ್ರಮುಖವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿಮಶಿ, ಮಮದಾಪೂರ-ಹುನ್ನರಗಿ, ಕುನ್ನೂರ-ಬಾರವಾಡ, ಗೋಕಾಕ ತಾಲೂಕಿನ ಗೋಕಾಕ-ಶಿಂಗಳಾಪೂರ ಸೇತುವೆ, ರಾಯಬಾಗ ತಾಲೂಕಿನ ಚಿಂಚಲಿ-ರಾಯಬಾಗ, ಹುಕ್ಕೇರಿ ತಾಲೂಕಿನ ಮೊದಗೆ-ಮರಣಹೋಳ, ಮೂಡಲಗಿ ತಾಲೂಕಿನ ಅವರಾದಿ-ನಂದಗಾಂವ, ಸುಣದೋಳಿ-ಮೂಡಲಗಿಯ ಸೇತುವೆಗಳು ಜಲಾವೃತವಾಗಿವೆ.

ಪ್ರವಾಹ ಭೀತಿ:ಜಿಲ್ಲೆಯ ಸಪ್ತ ನದಿಗಳ ಒಳಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ 1 ಲಕ್ಷ 30ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಒಳಹರಿವು ಹರಿದುಬರುತ್ತಿದೆ‌. ಮಲಪ್ರಭಾ ನದಿಗೆ 14 ಸಾವಿರ ಕ್ಯೂಸೆಕ್ ಹಾಗೂ ಘಟಪ್ರಭಾ ನದಿಗೆ 28,791 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಗೋಕಾಕ, ಮೂಡಲಗಿ ಹಾಗೂ ರಾಮದುರ್ಗ ತಾಲೂಕು ಸೇರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಇದನ್ನೂ ಓದಿ:ಗುರುಮಠಕಲ್​ನ ಗವಿಸಿದ್ದೇಶ್ವರ ದೇಗುಲ ಜಲಾವೃತ

ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿರುವ ಸೇತುವೆ ಮುಳುಗಡೆ ಆಗಿದೆ‌. ಮುಳುಗಡೆಯಾದ ಸೇತುವೆ ಮೇಲೆ ಜನರು ಸಂಚಾರ ನಡೆಸುತ್ತಿದ್ದಾರೆ. ಅಪಾಯ ಲೆಕ್ಕಿಸದೇ ಸೇತುವೆ ಬಳಿ ಯುವಕರು ಬೈಕ್‌ಗಳನ್ನು ವಾಶ್ ಮಾಡುತ್ತಿದ್ದರೆ, ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ಸೇತುವೆ ಬಳಿ ಕರೆತಂದಿದ್ದಾರೆ. ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ನಾಲ್ಕು ಕೆಳಹಂತದ ಸೇತುವೆ ಮುಳುಗಡೆ ಆಗಿವೆ. ಅವರಾದಿ-ಮೂಡಲಗಿ, ಅವರಾದಿ-ಮಹಾಲಿಂಗಪುರ, ಸುಣಧೋಳಿ-ಮೂಡಲಗಿ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಸೇತುವೆ ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ‌. ಮುಳುಗಡೆಯಾದ ಸೇತುವೆ ಮೇಲೆ ಜನಸಂಚಾರ ನಿಷೇಧಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಸ್ತೆಗಳು ಜಲಾವೃತ:ಬೆಳಗಾವಿ ಉಜ್ವಲ ನಗರ, ಓಂಕಾರ ನಗರ, ಮಹಾಂತೇಶ ನಗರ ಬ್ರಿಡ್ಜ್ ಸೇರಿ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ಅತಿಯಾದ ಮಳೆಗೆ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ತಗ್ಗುಗುಂಡಿಗಳಲ್ಲಿ ನೀರು ನಿಂತಿದೆ. ಕಳೆದ ವರ್ಷವೂ ಇದೆ ಸಮಸ್ಯೆ ಎದುರಾಗಿತ್ತು. ಆಗಲೂ ಸಾರ್ವಜನಿಕರು ಚರಂಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌.

ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ, ಪರಿಶೀಲನೆ: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನದಿತೀರದಲ್ಲಿರುವ ಮಂತುರ್ಗಾ ಬಳಿಯ ಹಾಲಾತ್ರಿ ಹಳ್ಳ ಉಕ್ಕಿ ಹರಿದು ಸೇತುವೆ ಮುಳುಗಡೆಯಾಗಿದೆ. ಹೆಮ್ಮಡಗಾ ಅರಣ್ಯ ವಲಯ ವ್ಯಾಪ್ತಿಯ ಗ್ರಾಮಗಳಿಗೆ ಖಾನಾಪೂರ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸಿಂಧನೂರು - ಹೆಮ್ಮಡಗಾ ರಸ್ತೆ ಮೇಲೆ ನೀರು ಹರಿಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಡಂಚಿನ ಗ್ರಾಮಗಳಲ್ಲಿ ಸೇತುವೆಗಳ ದುರಸ್ತಿ ಬಗ್ಗೆ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ABOUT THE AUTHOR

...view details