ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಮಲಪ್ರಭಾ ನದಿ ಸದ್ಯ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಮತ್ತೆ ಐದು ಅಡಿಗಳಷ್ಟು ನೀರಿನ ಹರಿವಿನಲ್ಲಿ ಏರಿಕೆಯಾಗಿದೆ.
ಮಳೆಗೆ ಮತ್ತೆ ಮುಳುಗಿದ ಜಮೀನು: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ - Belagavi latest news
ಕಳೆದ ನಾಲ್ಕು ದಿನಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಬೀಳುತ್ತಿದೆ. ಪರಿಣಾಮ ಬಹುತೇಕ ಜಲಾಶಯಗಳ ಹೊರ ಹರಿವು ಸಹ ಹೆಚ್ಚಾಗಿದೆ. ಇನ್ನು ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇನ್ನು ಮಲಪ್ರಭಾ ನದಿ ಅಕ್ಕ-ಪಕ್ಕದ ಜಮೀನುಗಳಿಗೆ ಮತ್ತೆ ನೀರು ನುಗ್ಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶಗಳು ಮುಳುಗಡೆಯಾಗಿವೆ. ಆ ಪೈಕಿ ಭತ್ತ, ಕಬ್ಬು, ಶೇಂಗಾ, ಸೊಯಾಬಿನ್, ತರಾಕಾರಿ ಬೆಳೆಗಳು ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣವಾಗಿ ನೀರು ಪಾಲಾಗಿವೆ. ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಇಂದು ಸ್ವಲ್ಪ ಬಿಡುವುಕೊಟ್ಟಿದೆ. ಹೀಗಾಗಿ ನವಿಲು ತೀರ್ಥ ಜಲಾಶಯದಿಂದ ಐದು ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಆದ್ರೆ, ಒಂದು ವಾರಗಳ ಕಾಲ ಮಳೆ ಅಬ್ಬರ ಮುಂದುವರೆಯುವ ಸಾಧ್ಯತೆ ಇದ್ದು, ಅಬ್ಬರದ ಮಳೆಯಾದರೆ ರಾಮದುರ್ಗ ತಾಲೂಕಿನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಲಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕೂಡ ಮಳೆ ಅಬ್ಬರ ಮುಂದುವರೆದಿದೆ. ಹೀಗಾಗಿ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊಯ್ನಾ ಡ್ಯಾಂನಿಂದ ನೀರು ಬಿಟ್ಟರೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ ಎನ್ನಲಾಗುತ್ತಿದೆ.