ಬೆಳಗಾವಿ: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಕೆಲ ಕಡೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಪೀರನವಾಡಿ, ಲಕ್ಷ್ಮಿಗಲ್ಲಿ ಉದ್ಯಮ್ ಬಾಗ್ನಲ್ಲಿ ಐವತ್ತಕ್ಕೂ ಅಧಿಕ ಮನೆಗಳಲ್ಲಿ ನೀರು ನುಗ್ಗಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ. ಅತಿಯಾದ ಮಳೆಯಿಂದ ನಗರದ ಅನೇಕ ಚರಂಡಿಗಳು ತುಂಬಿದ್ದು ರಸ್ತೆಗಳು ನದಿಯಂತೆ ಕಾಣುತ್ತಿವೆ.
ಭಾರೀ ಮಳೆಗೆ ನದಿಯಂತಾಂದ ರಸ್ತೆಗಳು ನಗರದ ಹೊರ ವಲದಲ್ಲಿರುವ ಅನೇಕ ಬತ್ತದ ಗದ್ದೆಗಳು ನಾಶವಾಗಿವೆ. ಮುಂಗಾರು ಹಂಗಾಮಿನಲ್ಲಿ ನಾಟಿಯಾಗಿದ್ದ ಭತ್ತ ಸಂಪೂರ್ಣ ಮಳೆಗೆ ಕೊಚ್ಚಿ ಹೊಗಿದೆ. ಇನ್ನು ಜಿಲ್ಲೆಯ ಖಾನಾಪೂರ ತಾಲೂಕಿನ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ತಾಲೂಕಿನ ಭಂಕಿ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ಜನರು ಪ್ರಾಣದ ಹಂಗು ತೊರೆದು ಸೇತುವೆ ಮೇಲೆ ಸಂಚಿರಿಸುತ್ತಿದ್ದಾರೆ. ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆ ಕುಸಿದಂತಹ ಪ್ರಕರಣಗಳು ದಾಖಲಾಗಿವೆ.
ಧರೆಗುರುಳಿದ ಭಾರೀ ಮರ:
ಭಾರೀ ಮಳೆಗೆ ಜಿಲ್ಲಾ ಆಸ್ಪತ್ರೆ ಸನಿಹ ಇದ್ದ ಬೃಹತ್ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಳಿ ಸಹಿತ ಮಳೆ ಆಗುತ್ತಿರುವುದರಿಂದ ನಗರದ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿಬೀಳುತ್ತಿವೆ.