ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕುಡಚಿ ಸೇತುವೆ ಮುಳುಗಡೆಯಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಕಾಗವಾಡ ತಾಲೂಕಿನಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕುಡಚಿ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.
ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೋಗೇರಿ ಸೇರಿದಂತೆ ಹಲವು ಪಟ್ಟಣಗಳಿಗೆ ವ್ಯಾಪಾರ ವಹಿವಾಟುಗಳಿಗೆ ತೆರಳಲು ಮುಖ್ಯ ರಸ್ತೆ ಇದೇ ಆಗಿದೆ. ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿರುವುದರಿಂದ ಹಾರೋಗೇರಿ ಕ್ರಾಸ್ ಮೂಲಕ ಅಥಣಿ-ಕಾಗವಾಡ ಮಾರ್ಗವಾಗಿ 50 ಕಿ.ಮೀ. ಹೆಚ್ಚಿಗೆ ಕ್ರಮಿಸಿ ತೆರಳುವ ಅನಿವಾರ್ಯತೆ ಉಂಟಾಗಿದೆ. ಕುಡಚಿ ಸೇತುವೆ ಮಹಾರಾಷ್ಟ್ರ-ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಈ ಸೇತುವೆ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸದ್ಯ ಜನ ಪರದಾಡುತ್ತಿದ್ದಾರೆ.