ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧ್ ಸಾಗರ ಜಲಪಾತ ಭೋರ್ಗರೆಯುತ್ತಿದೆ. ಈ ಹಿನ್ನೆಲೆ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಇದನ್ನು ಗಮನಿಸದ ಚಾಲಕ ರೈಲು ಚಲಾಯಿಸಿದ್ದಾನೆ.
ಇದರಿಂದಾಗಿ, ಮಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು ನಿಂತಲ್ಲೇ ನಿಂತಿದೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ. ಗೋವಾ ಗಡಿಯಲ್ಲಿ ವಿಪರೀತ ಮಳೆಯಿಂದ ರೈಲಿಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಅಪ್ಪಳಿಸುತ್ತಿದೆ. ರುದ್ರ ರಮಣೀಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ದೂಧ್ ಸಾಗರ ಭೋರ್ಗರೆತಕ್ಕೆ ಕರ್ನಾಟಕ - ಗೋವಾ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಮಳೆ ಕಡಿಮೆಯಾಗುವವರೆಗೆ ರೈಲು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ದೂಧ್ ಸಾಗರದ ನಯನ ಮನೋಹರ ದೃಶ್ಯವನ್ನು ಪ್ರಯಾಣಿಕರು ರೈಲಲ್ಲೇ ಕುಳಿತು ಕಣ್ತುಂಬಿಕೊಂಡರು.