ಬೆಳಗಾವಿ: ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮಘಟ್ಟ ಪ್ರದೇಶವಾದ ಖಾನಾಪುರ ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಾಡಂಚಿನ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪ್ರಸಿದ್ಧ ಹಬ್ಬಾನಟ್ಟಿ ಮಾರುತಿ ಮಂದಿರ ನೀರಿನಿಂದ ಆವೃತಗೊಂಡಿದೆ.
ಎಲ್ಲೆಲ್ಲಿ ಮಳೆ? : ಸತತ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು, ಕಳಸಾ, ಬಂಡೂರಿ, ಕೋಟ್ನಿ, ಮಂಗೇತ್ರಿ, ಪಣಸೂರಿ, ತಟ್ಟಿ, ಕುಂಭಾರ, ಬೈಲ್ ಮತ್ತಿತರ ಹಳ್ಳ-ಕೊಳ್ಳಗಳಲ್ಲಿ ಹರಿವು ಹೆಚ್ಚಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳವಾರದವರೆಗೆ ತಾಲ್ಲೂಕಿನ ಕಣಕುಂಬಿಯಲ್ಲಿ 7.8 ಸೆಂ.ಮೀ, ಲೋಂಡಾದಲ್ಲಿ 3.6 ಸೆಂ.ಮೀ ಮಳೆ ಬಿದ್ದಿದೆ. ಗುಂಜಿಯಲ್ಲಿ 5.3 ಸೆಂ.ಮೀ, ಜಾಂಬೋಟಿಯಲ್ಲಿ 4.5 ಸೆಂ.ಮೀ, ಅಸೋಗಾದಲ್ಲಿ 3.3 ಸೆಂ.ಮೀ, ಖಾನಾಪುರ, ನಾಗರಗಾಳಿ, ಬೀಡಿ, ಕಕ್ಕೇರಿ ಹಾಗೂ ಇತರೆ ಭಾಗಗಳಲ್ಲಿ ಸರಾಸರಿ 2.5 ಸೆಂ.ಮೀ ಮಳೆ ದಾಖಲಾಗಿದೆ.
ಸೇತುವೆ ಮುಳುಗಡೆ, ಸಂಚಾರ ಸ್ಥಗಿತ : ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ದಾರೋಳಿ-ಮೋದೆಕೊಪ್ಪ, ಕುಸಮಳಿ-ಜಾಂಬೋಟಿ, ಅಸೋಗಾ-ಭೋಸಗಾಳಿ, ಅಮಟೆ-ಗೋಲ್ಯಾಳಿ, ಲೋಂಡಾ-ವರ್ಕಡ, ಹೆಮ್ಮಡಗಾ-ತಳೇವಾಡಿ, ನೇರಸಾ-ಕೊಂಗಳಾ, ಗವ್ವಾಳಿ, ಅಬನಾಳಿ-ಡೊಂಗರಗಾಂವ, ಶಿರೋಲಿ- ತಿವೋಲಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ಕೌಲಾಪುರ ಗ್ರಾಮಗಳ ನಡುವಿನ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ಧರಾಶಾಹಿಯಾಗಿವೆ. ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.