ಬೆಳಗಾವಿ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗೋವಾ ಮಾರ್ಗದ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ವರುಣಾರ್ಭಟಕ್ಕೆ ರಸ್ತೆ ಕೊಚ್ಚಿಕೊಂಡು ಹೋದ ಹಿನ್ನೆಲೆ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸಪಡುತ್ತಿದ್ದಾರೆ.
ತಾಲೂಕಿನ ಉಚ್ಛಗಾಂವ್ ಹೊರವಲಯದಲ್ಲಿರುವ ಗೋವಾಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಆದ್ರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ನಾಲಾದ ನೀರು ರಭಸವಾಗಿ ಹರಿದು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.
ಇದರಿಂದ ಗೋವಾ, ಉಚ್ಛಗಾಂವ್ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಬೆಳಗಾವಿಗೆ ಬರುವ ಮತ್ತು ಹೋಗುವ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಖಾನಾಪುರದ ಆಂಜನೇಯ ದೇವಸ್ಥಾನ ಜಲಾವೃತ:
ಪಶ್ಚಿಮ ಘಟ್ಟ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಮಲಪ್ರಭಾ ನದಿ ತೀರದಲ್ಲಿರುವ ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಮಳೆ ಕಡಿಮೆ ಆಗುವವರೆಗೆ ಭಕ್ತರು ದೇವಸ್ಥಾನಕ್ಕೆ ಬರದಂತೆ ಗ್ರಾಮಸ್ಥರು ನಿಗಾ ವಹಿಸಿದ್ದಾರೆ. ಈಗಾಗಲೇ ಬಂದ ಭಕ್ತರನ್ನು ಮರಳಿ ಕಳಿಸಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಆಂಜನೇಯ ದೇವಸ್ಥಾನ ಮುಳುಗಡೆ ಆಗುತ್ತಿದೆ. ಆಂಜನೇಯ ಮೂರ್ತಿಯೂ ಜಲಾವೃತಗೊಂಡ ಹಿನ್ನೆಲೆಯಲ್ಲಿ ನಿತ್ಯ ಆಗುತ್ತಿದ್ದ ಪೂಜೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದೆ. ಮಲಪ್ರಭಾ, ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಪ್ರಮುಖ ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ಚಿಕ್ಕೋಡಿಯಲ್ಲೂ ಪ್ರವಾಹ ಭೀತಿ:
ಚಿಕ್ಕೋಡಿ ಉಪವಿಭಾಗದಲ್ಲಿ ಪಂಚನದಿಗಳ ತೀರದ ಗ್ರಾಮಗಳು ಪ್ರವಾಹ ಭೀತಿ ಎದುರಿಸುವಂತಾಗಿದ್ದು, ಏಳು ಸೇತುವೆಗಳು ಮುಳಗಡೆಯಾಗಿವೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮತ್ತು ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ದೂಧ್ಗಂಗಾ ನದಿಯಿಂದ 26,000 ಕ್ಯೂಸೆಕ್ಗೂ ಅಧಿಕ ಹಾಗೂ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ನಿಂದ 72,000 ಕ್ಯೂಸೇಕ್ ನೀರು ಸೇರಿದಂತೆ ಚಿಕ್ಕೋಡಿ ತಾಲೂಕಿನ ಕಲ್ಲೂಳ ಬಳಿ ಕೃಷ್ಣಾ ನದಿಗೆ 97,000 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಬಂದು ಸೇರುತ್ತಿದೆ. ಮಹಾರಾಷ್ಟ್ರದ ಯಾವುದೇ ಜಲಾಶಯಗಳಿಂದ ಇನ್ನೂ ನೀರು ಬಿಡುಗಡೆ ಮಾಡದಿದ್ದರೂ ಕೇವಲ ಮಳೆ ನೀರು ಮಾತ್ರ ಹರಿದು ಬರುತ್ತಿದೆ.
ಮಳೆಯಿಂದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಕಾಗವಾಡ ಹಾಗೂ ಅಥಣಿ ತಾಲೂಕಿನ ಸಾವಿರಾರು ರೈತರು ನದಿ ತೀರದಲ್ಲಿದ್ದ ಪಂಪ್‌ಸೆಟ್ ತೆಗೆಯಲು ಹರಸಾಹಸಪಡುವಂತಾಗಿದೆ.