ಬೆಳಗಾವಿಯಲ್ಲಿ ಮಳೆ,ಮನೆ, ವಿದ್ಯುತ್ ಮಗ್ಗದ ಕಾರ್ಖಾನೆಗಳಿಗೆ ನುಗ್ಗಿದ ನೀರು ಬೆಳಗಾವಿ:ನಗರದ ವಡಗಾವಿ ಸಫಾರ ಗಲ್ಲಿಯಲ್ಲಿ ಮಳೆಯು ಅವಾಂತರ ಸೃಷ್ಟಿಸಿದೆ. ಮನೆಗಳಿಗೆ, ವಿದ್ಯುತ್ ಮಗ್ಗದ ಕಾರ್ಖಾನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನೀರು ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ.
ಹೌದು.. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಫಾರ ಗಲ್ಲಿಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗುತ್ತಿದೆ. ಹಗಲು ರಾತ್ರಿ ಎನ್ನದೇ ಇಲ್ಲಿನ ಜನ, ಚಿಕ್ಕ ಮಕ್ಕಳು, ವಯೋವೃದ್ಧರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊಣಕಾಲುದ್ದ ನಿಂತಿದ್ದ ನೀರನ್ನು ಹೊರ ಹಾಕುವಲ್ಲಿ ಜನರು ನಿರಂತರ ಶ್ರಮಪಡಬೇಕಿದೆ. ಇನ್ನು ಮನೆಗಳಿಗೆ ಅಷ್ಟೇ ಅಲ್ಲದೇ ಇಲ್ಲಿನ ನಾರಾಯಣ ಚಿಲ್ಲಾಳ, ಮಹಾದೇವ ಸುತಾರ ಅವರ ವಿದ್ಯುತ್ ಮಗ್ಗದ ಕಾರ್ಖಾನೆಗಳಿಗೂ ನೀರು ನುಗ್ಗಿದ್ದು, ಲಕ್ಷಾಂತರ ರೂ ನಷ್ಟವಾಗಿದೆ. ಅಲ್ಲದೇ ಮಳೆ ನೀರಿನ ಜೊತೆಗೆ ಚರಂಡಿಯಲ್ಲಿನ ಕೊಳಚೆ ನೀರು ಕೂಡ ಹರಿದು ಬರುತ್ತಿರುವುದರಿಂದ ಜನರಿಗೆ ರೋಗ ರುಜಿನಿಗಳ ಭೀತಿಯೂ ಕಾಡುತ್ತಿದೆ.
ಮಳೆ ನೀರು ನುಗ್ಗಿ 10 ಮಗ್ಗಗಳಿಗೆ ಹಾನಿ:ನೇಕಾರ ನಾರಾಯಣ ಚಿಲ್ಲಾಳ ಎಂಬುವವರು ಮಾತನಾಡಿ, ನಾಲ್ಕೈದು ದಿನಗಳಿಂದ ಮಳೆ ಹೆಚ್ಚಾಗಿ ಬೀಳುತ್ತಿದ್ದು, ಭೂಮಿಯಲ್ಲಿನ ನೀರು ನುಗ್ಗಿ ನನ್ನ 10 ವಿದ್ಯುತ್ ಮಗ್ಗಗಳಿಗೆ ಹಾನಿಯಾಗಿದೆ. ಪ್ರತಿ ಮಗ್ಗಕ್ಕೆ 15 ಸಾವಿರ ರೂ. ಸೇರಿ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಮೊದಲೇ ಸೀರೆ ವ್ಯಾಪಾರವೂ ಇಲ್ಲ. ನಮಗೆ ನಷ್ಟವಾದರೂ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ವೇತನ ಕೊಡಲೇಬೇಕು. ಮಳೆಯಿಂದ ಈ ರೀತಿ ಸಮಸ್ಯೆ ಆಗಿದೆ. ಇದರಿಂದ ನಮಗೆ ಬಹಳ ಕಷ್ಟವಾಗುತ್ತಿದ್ದು, ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಸೂಕ್ತ ಪರಿಹಾರಕ್ಕೆ ಆಗ್ರಹ:ಇನ್ನೋರ್ವ ನೇಕಾರ ಮಹಾದೇವ ಸುತಾರ ಮಾತನಾಡಿ 2016ರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಈ ರೀತಿ ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಮಗ್ಗ, ನೂಲು, ಸೀರೆ, ಮಷಿನ್ ನೀರಿನಲ್ಲಿ ಮುಳುಗಿದ್ದರಿಂದ ಅಂದಾಜು 15 ಸಾವಿರ ರೂ. ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿದರು.
ಮನೆಗೆ ನುಗ್ಗಿದ ಕೊಳಚೆ ನೀರು:ಸುವರ್ಣಾ ಚಿಲ್ಲಾಳ ಎಂಬುವವರು ಮಾತನಾಡಿ, ಡ್ರೈನೇಜ್ ಬ್ಲಾಕ್ ಆಗಿದ್ದರಿಂದ ಕೊಳಚೆ ನೀರೆಲ್ಲಾ ಮನೆ ಒಳಗೆ ಬಂದು, ಸುತ್ತಲೂ ದುರ್ವಾಸನೆ ಬೀರುತ್ತಿದೆ. ಅಧಿಕಾರಿಗಳು ಇತ್ತ ಬರುತ್ತಿಲ್ಲ. ಕಳೆದ ವರ್ಷವಷ್ಟೇ ಹೊಸ ಚರಂಡಿ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ಕಡೆ ಗಮನಹರಿಸಿ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಮುಂದೆ ಹೋಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕ, ಅಧಿಕಾರಿಗಳಿಂದ ಪರಿಶೀಲನೆ: ನೀರು ನುಗ್ಗಿದ ಮನೆ ಹಾಗೂ ಕಾರ್ಖಾನೆಗಳಿಗೆ ಸ್ಥಳೀಯ ಶಾಸಕ ಅಭಯ್ ಪಾಟೀಲ ಮತ್ತು ಕೆಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಜನ ಇಷ್ಟೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದು, ಅಧಿಕಾರಿಗಳು ಶೀಘ್ರವೇ ಶಾಶ್ವತವಾಗಿ ಸಮಸ್ಯೆ ಪರಿಹರಿಸಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.
ಇದನ್ನೂಓದಿ:Heavy rain in Coastal Karnataka: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಭಾರಿ ಮಳೆ ಮುನ್ಸೂಚನೆ; ಶಾಲಾ-ಕಾಲೇಜಿಗೆ ರಜೆ, ಪದವಿ ಪರೀಕ್ಷೆಗಳು ಮುಂದೂಡಿಕೆ
ಬೆಳಗಾವಿ ಸೇರಿ ಆರು ತಾಲ್ಲೂಕುಗಳ ಶಾಲೆಗಳಿಗೆ ರಜೆ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಬೆಳಗಾವಿ, ಖಾನಾಪುರ, ನಿಪ್ಪಾಣಿ, ಮೂಡಲಗಿ, ಯರಗಟ್ಟಿ ಹಾಗೂ ಸವದತ್ತಿ ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ-ಪ್ರೌಢಶಾಲೆಗಳಿಗೆ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ ಬುಧವಾರ (ಜು.26) ಒಂದು ದಿನ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆಯನ್ನು ಘೋಷಿಸಲಾಗಿರುತ್ತದೆ. ಖಾನಾಪುರ ತಾಲ್ಲೂಕಿನಲ್ಲಿ ಮಾತ್ರ ಶಾಲೆಗಳ ಜತೆಗೆ ಪಿಯು ಕಾಲೇಜುಗಳಿಗೂ ರಜೆ ನೀಡಲಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳಿಗೂ ರಜೆ:ಬೆಳಗಾವಿ, ಖಾನಾಪುರ, ಮೂಡಲಗಿ, ಸವದತ್ತಿ, ಯರಗಟ್ಟಿ, ನಿಪ್ಪಾಣಿ ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಿಗೂ ಬುಧವಾರ (ಜು.26) ರಜೆ ಘೋಷಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.