ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ನೀರಿನ ಹರಿವಿನಲ್ಲಿ ಎರಡು ಅಡಿಯಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ-ಅಂಕಲಿ ಸಂಪರ್ಕಿಸುವ ಕೃಷ್ಣಾ ನದಿ ಸೇತುವೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರು, ಕಲ್ಲೋಳ ಗ್ರಾಮಕ್ಕೆ ಭೇಟಿ ನೀಡಿ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದರು. ಈಗಾಗಲೆ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದು ಬರುತ್ತಿದೆ. ಸಂಭವನೀಯ ಪ್ರವಾಹ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ತಾಲೂಕಾಡಳಿತಕ್ಕೆ ಸೂಚಿಸಿದರು.
ಮಳೆಯ ಅಬ್ಬರದಿಂದ ಚಿಕ್ಕೋಡಿ ಉಪವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತ್ತಗೊಂಡಿವೆ. ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್-ಭೀವಶಿ, ಅಕ್ಕೋಳ-ಸಿದ್ನಾಳ, ಮಮದಾಪೂರ-ಹುಣ್ಣರಗಿ, ಭೋಜವಾಡಿ-ಕೊಣ್ಣೂರ ಹಾಗೂ ಕಾರದಗಾ-ಭೋಜ, ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.