ಬೆಳಗಾವಿ:ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ 139ಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಅಲ್ಲದೇ ಪಂಚಗಂಗಾ ನದಿ ನೀರಿನಿಂದ ರಾಷ್ಟ್ರೀಯ ಹೆದ್ದಾರಿ- 4 ಜಲಾವೃತ್ತಗೊಂಡಿದ್ದು, ಬೆಂಗಳೂರು-ಪುಣೆ ರಸ್ತೆಯನ್ನು ಬಂದ್ ಮಾಡಲಾಗಿದೆ.
ಭಾರಿ ಮಳೆಯಿಂದಾಗಿ ಮನೆಗೆ ನುಗ್ಗಿರುವ ನೀರು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಭಾರಿ ಮಳೆಗೆ 139 ಕ್ಕೂ ಹೆಚ್ಚಿನ ಮನೆಗಳು ಧರೆಗುರುಳಿವೆ. ಕೆಲವು ಗ್ರಾಮದಲ್ಲಿ ಮನೆಗೋಡೆ ಕುಸಿತ, ಮೇಲ್ಚಾವಣಿ ಕುಸಿತ, ಇನ್ನೂ ಕೆಲವು ಗ್ರಾಮಗಳಲ್ಲಿ ಮನೆಗಳು ಕುಸಿತವಾಗಿವೆ. ಅಂಗ್ರೋಳ್ಳಿ, ಲಿಂಗನಮಠ, ಚುಂಚವಾಡ, ದೇವಲತ್ತಿ ಗ್ರಾಮಗಳಲ್ಲಿನ ಮನೆಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಳಗಾವಿಯಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದ್ದು, ನಗರದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕಂಜರ್ ಗಲ್ಲಿಯಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ಮಳೆನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.
ಬಾರಿ ಮಳೆಗೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್:
ಪಂಚಗಂಗಾ ನದಿ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 4 ಜಲಾವೃತ್ತಗೊಂಡಿದ್ದು, ನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ಯಮಗರ್ಣಿ ಗ್ರಾಮದ ಬಳಿ ಹೆದ್ದಾರಿಗೆ ನೀರು ಬಂದಿದ್ದು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.