ಬೆಳಗಾವಿ:ಜಿಲ್ಲೆಯಾದ್ಯಂತ ಮತ್ತೆ ಮಹಾ ಮಳೆ ಮುಂದುವರೆದಿದೆ. ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡ ಕೃಷ್ಣಾ ನದಿಯ ಒಳಹರಿವು ಸುಮಾರು 15 ಅಡಿಯಷ್ಟು ಹೆಚ್ಚಾಗಿದ್ದು, ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಸೇತುವೆ ಸಂಪೂರ್ಣ ಮುಳುಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎರಡು ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಯ ಕಲ್ಲೋಳ-ಯಡೂರ ಬ್ರಿಡ್ಜ್ ಕಂ ಬ್ಯಾರೇಜ್, ವೇದಗಂಗಾ ನದಿಯ ಕಾರದಗಾ ಬೋಜ ಸೇತುವೆ ಮುಳುಗಡೆಯಾಗಿವೆ. ಭಾರೀ ಮಳೆಯಿಂದ ಜಿಲ್ಲೆಯ ಕೆಲವಡೆ ಪ್ರವಾಹ ಭೀತಿ ಎದುರಾಗಿದ್ದು, ಬೆಳಗಾವಿ-ರಾಮದುರ್ಗ ಮಧ್ಯದ ನಾಲ್ಕು ಪ್ರಮುಖ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಲಪ್ರಭಾ ನದಿ ನೀರು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ.