ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಗ್ರಾಮಗಳು ಮತ್ತೊಮ್ಮೆ ಜಲಾವೃತವಾಗಿವೆ. ಜೊತೆಗೆ ರಾಮದುರ್ಗ ತಾಲೂಕಿನಲ್ಲಿ ಬೃಹತ್ ಆಲದ ಮರವೊಂದು ಧರೆಗುರುಳಿದೆ. ಜಮೀನುಗಳಲ್ಲಿ ನಿಂತ ನೀರಿನಿಂದಾಗಿ ರೈತರು ಹೈರಾಣಾಗಿದ್ದಾರೆ.
ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಮಳೆಯ ಅವಾಂತರ ಜಿಲ್ಲೆಯ ಅಥಣಿ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ, ರಾಯಭಾಗ, ನಿಪ್ಪಾಣಿ ತಾಲೂಕಿನ ಹಲವೆಡೆ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಅಲ್ಲಲ್ಲಿ ರಸ್ತೆಗಳಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ರಾಮದುರ್ಗ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಹತ್ತಾರು ಹಳ್ಳಿಗಳು ಮುಳುಗಡೆಯಾಗಿವೆ.
ಮಲಪ್ರಭಾ ನದಿಗೆ ಮತ್ತೆ ನೀರು:
ಮಲಪ್ರಭಾ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಡುಗಡೆ ಮಾಡಲಾಗಿದ್ದು, ರಾಮದುರ್ಗ ತಾಲೂಕಿನ ಸುರೇಬಾನ, ಹಿರೇ ಹಂಪಿಹೊಳಿ, ಚಿಕ್ಕ ಹಂಪಿಹೊಳಿ ಸೇರಿದಂತೆ ಅನೇಕ ಗ್ರಾಮದಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ನಿನ್ನೆ ಮಲಪ್ರಭಾ ನದಿಗೆ ಸುಮಾರು 2300 ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಇನ್ನು, ಬೆಳಗಾವಿ-ರಾಮದುರ್ಗ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಳಿ ಚಿಕ್ಕೋಡಿ - ಮೀರಜ್ ಹೆದ್ದಾರಿ ಮೇಲೆ ನೀರು ನಿಂತಿದೆ. ಇನ್ನೇನಾದರೂ ಸ್ವಲ್ಪ ನೀರು ಹೆಚ್ಚಾದರೂ ಸಹ ಹೆದ್ದಾರಿ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.