ಕರ್ನಾಟಕ

karnataka

ETV Bharat / state

ಕೆಎಲ್ಇ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ: 52 ವರ್ಷದ ವ್ಯಕ್ತಿಯ ಹೃದಯ 17ರ ಯುವಕನಿಗೆ ಮರು ಜೋಡಣೆ! - ಬೆಳಗಾವಿಯ ಕೆಎಲ್ಇ ಆಸ್ಪತ್ರೆ

ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿ ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ಹೃದಯವನ್ನು ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Heart transplant at kle hospital in belgavi
ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ

By

Published : Mar 23, 2021, 7:01 PM IST

ಬೆಳಗಾವಿ: ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿಯ ಹೃದಯವನ್ನು ಕರ್ನಾಟಕ ಮೂಲದ 17 ವರ್ಷದ ಯುವಕನ ದೇಹದಲ್ಲಿ ಮರು ಜೋಡಣೆ ಮಾಡಲಾಗಿದೆ.

ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಪಿಯುಸಿ ಓದುತಿದ್ದ ಯುವಕ ಡಯಲೇಟೆಡ್ ಕಾರ್ಡಿಯೋಮಯೊಪಥಿ ಎಂಬ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ. ಪರಿಣಾಮ ಯುವಕನ ಹೃದಯ ಅಶಕ್ತವಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದೇ ಇದ್ದಾಗ ಉಸಿರಾಟದ ತೊಂದರೆ ಜೊತೆಗೆ ನಡೆದಾಡಲು ಕಷ್ಟವಾಗಿದೆ. ಯುವಕನ ಆರೋಗ್ಯ ಸ್ಥಿತಿ ಏರುಪೇರಾಗಿದ್ದರಿಂದ ಆತನ ಕುಟುಂಬಸ್ಥರು ಕೆಎಲ್ಇ ಆಸ್ಪತ್ರೆಗೆ ತಪಾಸಣೆಗಾಗಿ ಕರೆ ತಂದಿದ್ದಾರೆ.

ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾಧ್ಯಮಗೋಷ್ಠಿ

ಈ ವೇಳೆ ಆಸ್ಪತ್ರೆಯ ಮಕ್ಕಳ ಹೃದಯ ತಜ್ಞ ಡಾ. ವಿರೇಶ ಮಾನ್ವಿ, ಮುಖ್ಯ ಶಸ್ತ್ರಚಿಕಿತ್ಸಕ ಡಾ. ರಿಚರ್ಡ್​ ಸಾಲ್ಡಾನಾ ನೇತೃತ್ವದ ತಂಡ, ಯುವಕನ ಆರೋಗ್ಯ ತಪಾಸಣೆ ‌ನಡೆಸಿ ರಾಜ್ಯ ಸರ್ಕಾರದ ಅಂಗಾಂಗ ಕಸಿ ಪ್ರಾಧಿಕಾರದ ಜೀವ ಸಾರ್ಥಕತೆಯಲ್ಲಿ ರೋಗಿಯ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ನಂತರ ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿ ಮೆದುಳು ನಿಷ್ಕ್ರಿಯ ಆಗಿದ್ದರಿಂದ ಆತನ ಹೃದಯವನ್ನ ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಹೃದಯ ಮರು ಜೋಡಣೆಯ ಬಳಿಕ ಯುವಕ ಕೂಡ ಆರೋಗ್ಯವಾಗಿದ್ದಾನೆ.

ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಡಾ. ರಿಚರ್ಡ್​ ಸಾಲ್ಡಾನಾ, ಡಾ. ಮೋಹನ ಗಾನ, ಡಾ. ಪ್ರವೀಣ ತಂಬ್ರಳ್ಳಿಮಠ, ಡಾ. ಕಿರಣ ಕುರುಕುರೆ, ಡಾ. ರವಿ ಘಟ್ನಟ್ಟಿ, ಡಾ. ದರ್ಶನ ಡಿ.ಎಸ್., ಡಾ. ಅಭಿಷೇಕ, ಅರವಳಿಕೆ ತಜ್ಞ ವೈದ್ಯ ಡಾ. ಆನಂದ ವಾಗರಾಳಿ ಸೇರಿದಂತೆ ಇತರ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಾರ್ವಜನಿಕರು ಮೂಢನಂಬಿಕೆಯಿಂದ ಹೊರ ಬಂದು ಅಂಗಾಂಗಗಳನ್ನು ದಾನ ಮಾಡಬೇಕು. ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಆಸ್ಪತ್ರೆಯೊಂದರಲ್ಲಿಯೇ ಸುಮಾರು 20ಕ್ಕೂ ಅಧಿಕ ಜನರು ಹೃದಯಕ್ಕಾಗಿ ಕಾಯತ್ತಿದ್ದರು. ಆದರೆ, ಹೃದಯ ಸಿಗದೆ ಅದರಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಆದ್ದರಿಂದ ಪುನರ್ಜನ್ಮ ಎನ್ನುವ ಮೂಢನಂಬಿಕೆಯಿಂದ‌ ಜನರು ಹೊರ ಬಂದು ಅಂಗಾಂಗ ದಾನ ಮಾಡಬೇಕು. ಮಣ್ಣಲ್ಲಿ ಮಣ್ಣಾಗುವ ಬದಲು ಮತ್ತೊಬ್ಬರ ಜೀವ ಉಳಿಸುವ ಕೆಲಸವನ್ನು ಜನರು ಮಾಡಬೇಕಿದೆ ಎಂದರು.

ಓದಿ:ಸಂಯೋಜಿತ ಹೃದಯ, ಎರಡು ಶ್ವಾಸಕೋಶ ಕಸಿ ಯಶಸ್ವಿ: ಮರುಜೀವ ಪಡೆದ ರೋಗಿಗಳು

ABOUT THE AUTHOR

...view details