ಕರ್ನಾಟಕ

karnataka

ETV Bharat / state

ಮನೆ ಬಾಗಿಲಿಗೆ ಆರೋಗ್ಯ ಸೇವೆ, ಶೀಘ್ರದಲ್ಲಿ 'ಗೃಹ ಆರೋಗ್ಯ', 'ಆಶಾಕಿರಣ' ಯೋಜನೆ ಆರಂಭ: ಸಚಿವ ದಿನೇಶ್ ಗುಂಡೂರಾವ್

ಗೃಹ ಆರೋಗ್ಯ ಯೋಜನೆಯನ್ನು ಬೆಳಗಾವಿ, ಗದಗ ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ, ಆಶಾಕಿರಣ ಯೋಜನೆಯನ್ನು ಹಾವೇರಿ, ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

Minister Dinesh Gundu Rao spoke to the media.
ಮಾಧ್ಯಮದವರ ಜೊತೆ ಸಚಿವ ದಿನೇಶ ಗುಂಡೂರಾವ್ ಮಾತನಾಡಿದರು.

By ETV Bharat Karnataka Team

Published : Oct 4, 2023, 10:42 PM IST

Updated : Oct 4, 2023, 10:48 PM IST

ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ: ಮುಂದಿನ ಎರಡು ತಿಂಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 'ಗೃಹ ಆರೋಗ್ಯ' ಮತ್ತು 'ಆಶಾ ಕಿರಣ' ಎಂಬ ಎರಡು ಹೊಸ ಹೊಸ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರತಿಯೊಬ್ಬರ ಆರೋಗ್ಯ ತಪಾಸಣೆಗಾಗಿ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸುವ ಗೃಹ ಆರೋಗ್ಯ ಯೋಜನೆ ಮತ್ತು ಆಶಾಕಿರಣ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಗೃಹ ಆರೋಗ್ಯ ಯೋಜನೆಯನ್ನು ಬೆಳಗಾವಿ, ಗದಗ ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ, ಆಶಾಕಿರಣ ಯೋಜನೆಯನ್ನು ಹಾವೇರಿ ಮತ್ತು ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದ್ದೇವೆ. ರೋಗಗಳನ್ನು ಪತ್ತೆ ಹಚ್ಚಿ ಮನೆಗೆ ಔಷಧಿ ಕೂಡ ವಿತರಿಸುತ್ತೇವೆ ಎಂದು ಹೇಳಿದರು.

ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು, ಎಂಬಿಬಿಎಸ್ ವೈದ್ಯರ ಕೆಲಸದ ಮೇಲೆ ನಿಗಾ ಇಟ್ಟಿದ್ದೇವೆ. ಅವರಿಗೆಲ್ಲಾ ಇ-ಹಾಜರಾತಿ ಕಡ್ಡಾಯಗೊಳಿಸಿದ್ದೇವೆ. ಆಸ್ಪತ್ರೆಯಲ್ಲಿ ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ‌ ಗುಂಡೂರಾವ್ ಸ್ಪಷ್ಟಪಡಿಸಿದರು.

ಡೆಂಗ್ಯೂ ಕೇಸ್‌ಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಜಾಸ್ತಿ ಕೇಸ್‌ಗಳು ದಾಖಲಾಗಿಲ್ಲ‌. ಆದರೆ, ಈ ತಿಂಗಳು ಮತ್ತು ಮುಂದಿನ ತಿಂಗಳು ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗ ಮಳೆ ಕೂಡ ಬರುತ್ತಿರುವುದರಿಂದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಡೆಂಗ್ಯೂ ಹರಡುವ ಸಾಧ್ಯತೆಯಿದೆ. ಹಾಗಾಗಿ, ಎಚ್ಚರ ವಹಿಸುವ ಅವಶ್ಯಕತೆಯಿದೆ ಎಂದರು.

ಮಾನಸಿಕ ಅಸ್ವಸ್ಥರಿಗೆ ಕಭಿ:ಎಲ್ಲಾ ಜಿಲ್ಲಾಸ್ಪತ್ರೆಗಳು ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಬ್ರೇನ್ ಹೆಲ್ತ್ ಇನಿಸಿಯೇಟಿವ್ (ಕಭಿ) ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ಟೆಲಿ ಸಂದರ್ಶನ ಮೂಲಕ ಮಾನಸಿಕ ಅಸ್ವಸ್ತರು ತಜ್ಞರಿಂದ ಸೂಕ್ತ ಸಲಹೆ, ಮಾರ್ಗದರ್ಶನ, ಪರಿಹಾರ ಪಡೆಯಬಹುದಾಗಿದೆ. ಅಲ್ಲದೇ ಮುಂದಿನ ಚಿಕಿತ್ಸೆ ಕುರಿತು ಅವರಿಗೆ ತಿಳಿಸುತ್ತಾರೆ ಎಂದು ಸಚಿವರು ಹೇಳಿದರು.

104 ಸಹಾಯವಾಣಿ ಮತ್ತೆ ಆರಂಭ: ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಜನರಿಗೆ ಉಚಿತವಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇವೆ ಸರಿಯಾಗಿ ಲಭ್ಯವಾಗುತ್ತಿಲ್ಲ. ನಿರ್ವಹಣೆ ಕೊರತೆ ಸೇರಿ ಇತರೆ ಕಾರಣಗಳಿಂದ ಕೆಲವು ಕಡೆ ಬಂದ್ ಆಗಿವೆ. ಹಾಗಾಗಿ, ಅವುಗಳ ನಿರ್ವಹಣೆ ಮತ್ತು ದಿನದ 24 ಗಂಟೆಗಳ ಸೇವೆಗಾಗಿ ಹೊಸ ಏಜೆನ್ಸಿಗಳಿಗೆ ಟೆಂಡರ್ ನೀಡುತ್ತೇವೆ. ಇನ್ನು ಅವಶ್ಯಕತೆ ಇರುವ ಕಡೆಗಳಲ್ಲಿ ಹೊಸದಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಆರಂಭಿಸಲಾಗುವುದು. ಮುಂದಿನ 4 ತಿಂಗಳಲ್ಲಿ ಅವು ಕಾರ್ಯಾರಂಭ ಮಾಡಲಿವೆ. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿದೆ. 104 ಸಹಾಯವಾಣಿ ಮರು ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ವಿಪಕ್ಷಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ವಿಪಕ್ಷಗಳ ಆರೋಪಕ್ಕೆ ಸುಮ್ಮನೆ ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ. ಎಲ್ಲ ಕೆಲಸ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ನಮಗೆ ಭಾರಿ ಬಹುಮತವಿದೆ. ಹುಚ್ಚರ ಸಂತೆಯಲ್ಲಿ ಏನೇನೋ ಮಾತಾಡಿದರೆ ಏನೂ ಪ್ರಯೋಜನವಿಲ್ಲ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದರು. ಇನ್ನು ನೀವು ಮತ್ತೆ ಕೆಪಿಸಿಸಿ ಅಧ್ಯಕ್ಷರಾಗುತ್ತಿರಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾಕೆ ನನ್ನ ಮಂತ್ರಿಸ್ಥಾನದಿಂದ ತೆಗೀಬೇಕಾ? ಎಂದು ಹಾಸ್ಯಚಟಾಕಿ ಹಾರಿಸಿದರು.

ಇದನ್ನೂಓದಿ: ಸ್ವದೇಶಿ ನಿರ್ಮಿತ ಟ್ವಿನ್ ಸೀಟರ್ ತೇಜಸ್ ಯುದ್ಧವಿಮಾನದ ವಿಶೇಷತೆಗಳಿವು..

Last Updated : Oct 4, 2023, 10:48 PM IST

ABOUT THE AUTHOR

...view details