ಬೆಳಗಾವಿ: ರೈತರಿಗೆ ಕಳೆದ ಮೂರು ವರ್ಷಗಳಿಂದ ಕಬ್ಬಿನ ಬಿಲ್ ಪಾವತಿಸದವರು ಸಾಹುಕಾರ ಹೇಗಾಗಲು ಸಾಧ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರ ವಿರುದ್ಧ ಹರಿಹಾಯ್ದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಕಬ್ಬಿನ ಬಾಕಿ ಬಿಲ್ಗಾಗಿ ರೈತರು ಬೀದಿಗಿಳಿದಿದ್ದಾರೆ. ರೈತರ ಕಬ್ಬಿನ ಬಾಕಿ ಬಿಲ್ ನೀಡದವರು ಸಾಹುಕಾರ ಹೇಗಾಗಲು ಸಾಧ್ಯ. ಮೈತ್ರಿ ಸರ್ಕಾರದ ಸಮಯದಲ್ಲಿ ಜಾರಕಿಹೊಳಿ-ಹೆಬ್ಬಾಳ್ಕರ್ ಜಗಳ ನೋಡಿ ನನಗೆ ಸಾಕಾಯ್ತು. ಆದರೂ ಗೋಕಾಕಿನಲ್ಲಿ ನೀರಾವರಿ ಯೋಜನೆಗೆ 250 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೆ ಎಂದು ಹೇಳಿದರು.
ರಾಜ್ಯದಲ್ಲಿ ಯಡಿಯೂರಪ್ಪನವರೇ ಸಿಎಂ ಆಗಲಿ, ಬಿಜೆಪಿಯೇ ಅಧಿಕಾರ ನಡೆಸಲಿ. ಈ ಸರ್ಕಾರ ಉರುಳಿಸಿದ್ರೆ ರಾಜ್ಯದ 13 ಜಿಲ್ಲೆಗಳ ಪ್ರವಾಹ ಸಂತ್ರಸ್ತರು ಬೀದಿಗೆ ಬರುತ್ತಾರೆ.ಆದರೆ, ಅವರಿಗೆ ಬದುಕು ಕಟ್ಟಿಕೊಡಬೇಕಿದ್ದ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಬ್ಯೂಸಿ ಆಗಿರುವುದು ಬೇಸರದ ಸಂಗತಿ ಎಂದರು.
ಪ್ರವಾಹ ಸಂತ್ರಸ್ತರಿಗಾಗಿ ಆದರೂ ಈ ಸರ್ಕಾರ ಇರಬೇಕು. ಈ ಸರ್ಕಾರ ಉರುಳುತ್ತೆ ಎಂಬುವುದು ಸಿದ್ದರಾಮಯ್ಯನವರ ಹಗಲುಗನಸು. ಪ್ರವಾಹಕ್ಕೆ ಜನರ ಬದುಕು ಬೀದಿಗೆ ಬಂದಿದೆ. ಮಕ್ಕಳು ಬೀದಿಯಲ್ಲಿ ಪಾಠ ಕಲಿಯುವಂತಾಗಿದೆ. ಸದ್ಯ ಸಾರ್ವತ್ರಿಕ ಚುನಾವಣೆ ಬೇಡವೇ ಬೇಡ. ಬಿಜೆಪಿ ಸರ್ಕಾರ ಐದು ವರ್ಷ ಪೂರೈಸುವುದು, ಬಿಡುವುದು ನನ್ನ ಕೈಯಲ್ಲಿದೆ. ಉಪಚುನಾವಣೆ ಫಲಿತಾಂಶದ ಬಳಿಕ ನಮ್ಮ ನಿಲುವು ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.
ರಾಜ್ಯ ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣ ಇದೆ. ಯಡಿಯೂರಪ್ಪನವರು ಕಷ್ಟಪಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಕೊನೆ ಹಂತದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ರಾಜ್ಯದ ಜನರು ನೆನಪು ಇಟ್ಟುಕೊಳ್ಳುವಂತ ಕೆಲಸ ಮಾಡಲಿ. ಬೇಕಾದರೆ ಯಡಿಯೂರಪ್ಪ ಅವರಿಗೆ ಸಲಹೆ ನೀಡಲು ನಾನು ಸಿದ್ಧ. ನನಗೆ ಸಿಕ್ಕ ಸಮಯದಲ್ಲಿ ರಾಜ್ಯದ ರೈತರ ಪರವಾಗಿ ಉತ್ತಮ ಕೆಲಸ ಮಾಡಿ ಖುಷಿಯಿಂದ ಅಧಿಕಾರ ಬಿಟ್ಟುಕೊಟ್ಟಿದ್ದೇನೆ ಎಂದರು.