ಚಿಕ್ಕೋಡಿ:ನಾನು ಇಂಥವರಿಗೇ ಬೆಂಬಲ ಕೊಡ್ತಿನಿ ಅಂತ ಯಾರಿಗೂ ಬರೆದುಕೊಟ್ಟಿಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಬಳಿಕ ಏಪ್ರಿಲ್ನಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂಬ ಸಿದ್ದು ಹೇಳಿಕೆ ವಿಚಾರವಾಗಿ, 13 ಜಿಲ್ಲೆಯಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಪಕ್ಷ ಸಂಘಟನೆ ಮಾಡಿ ಅಧಿಕಾರದ ಬೆನ್ನುಬಿದ್ದರೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡೋದು ನನ್ನ ವೈಯಕ್ತಿಕ ಈರ್ಷೆಗಳಿಗಲ್ಲ ಎಂದರು.
ಸರ್ಕಾರ ಬಿದ್ದು ಹೋಗಿ ಗೌವರ್ನರ್ ರೂಲ್ ಬಂದರೆ ಜನರ ಗತಿ ಏನು? ಅದಕ್ಕಾಗಿ ನಾನು ಸರ್ಕಾರ ಇರಬೇಕೊ ಬೇಡವೋ ಎಂದು ವಿಚಾರ ಮಾಡಿದ್ದೀನಿ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೋ ಯಾವ ಪಕ್ಷ ಅಧಿಕಾರಕ್ಕಾದರೂ ಬರಲಿ ನನಗೆ ಅದು ಮುಖ್ಯವಲ್ಲ. ನನಗೆ ರಾಜ್ಯದ ಜನರ ಹಿತ ಮಾತ್ರ ಮುಖ್ಯ ಎಂದು ಹೇಳಿದ್ರು.
ಚುಣಾವಣೆಗೆ ಹೋಗೋಣ, ಅದಕ್ಕೇನೂ ಅರ್ಜೆಂಟಿದೆ ಜನರ ಸಮಸ್ಯೆ ಬಗೆಹರಿಸಲಿ ನಂತರ ಚುನಾವಣೆಗೆ ಹೋಗೋಣ. ಬಾದಾಮಿ ಒಂದು ಕ್ಷೇತ್ರಕ್ಕೆ ಹೋಗಿ ಬಂದ್ರೆ ಆಗೋಲ್ಲ. ಬಾದಾಮಿ ಬಿಟ್ಟು ಎಲ್ಲಿಗೆ ಹೋಗಿದ್ದಾರೆ ಸಿದ್ದರಾಮಯ್ಯನವರು ಎಂದು ಪ್ರಶ್ನೆ ಮಾಡಿದ್ದಾರೆ. ಚುನಾವಣೆ ನಡೆಸೋದೇ ಕೆಲಸಾನಾ ಇವರಿಗೆ? ನಾನು ಬಿಜೆಪಿ ಜೊತೆ ಸರ್ಕಾರ ಮಾಡುವ ಹಾಗಿದ್ದಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಸಪೋರ್ಟ್ ಮಾಡುತ್ತಿದ್ದೆ. ನನಗೆ ಪ್ರಧಾನ ಮಂತ್ರಿಗಳಿಂದಲೇ ಆಹ್ವಾನವಿತ್ತು. ನೀವೇ ಮುಖ್ಯಮಂತ್ರಿ ಆಗುವರಂತೆ ಬನ್ನಿ ಎಂದಿದ್ದರು.
ಕೋಮುವಾದಿಗಳಿಗೆ ಸಪೋರ್ಟ್ ಮಾಡ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಹಾಗೆ ಕೇಳೋದಕ್ಕೆ ಅವರು ಯಾರು? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವ ವರ್ಗದ ಜನರಿಗೆ ಸಮುದಾಯ ಭವನಗಳನ್ನು, ಸರ್ಕಾರಿ ಭೂಮಿಗಳನ್ನ ಕೊಟ್ರು. ಎಲ್ಲಾ ವರ್ಗದವರನ್ನೂ ಇವರು ಗೌರವಿಸಿದ್ದಾರಾ? ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ಯಾರಿಗೆ ಸಮುದಾಯ ಭವನ ನೀಡಿದ್ರು, ಯಾರನ್ನ ಕಡೆಗಣಿಸಿದ್ರು ಅಂಕಿ ಅಂಶ ನೀಡಲಿ ಎಂದು ಗರಂ ಆದ್ರು.
ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯವಾ? ಚರ್ಚೆ ಮಾಡೋದಾದ್ರೆ ಅವರ ಬಗ್ಗೆ ಬೇಕಾದಷ್ಟು ವಿಷಯಗಳಿವೆ ಬನ್ನಿ ಎಂದು ಸವಾಲು ಹಾಕಿದ್ದಾರೆ.