ಬೆಳಗಾವಿ/ಬೆಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಕ್ಕುಚ್ಯುತಿ ಪ್ರಸ್ತಾವನೆ ಅಂಗೀಕರಿಸಿದ ಸ್ಪೀಕರ್ ಯು ಟಿ ಖಾದರ್ ಪ್ರಕರಣದ ವಿಚಾರಣೆಯನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ಹಾಕಿರುವ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿದರು.
ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕೋರಿದರು. ಈ ವೇಳೆ ಸ್ಪೀಕರ್ ಈಗ ಬೇಡ, ನಂತರ ನೋಡೋಣ ಎಂದರು. ಈ ವೇಳೆ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಹಕ್ಕುಚ್ಯುತಿ ಮಂಡನೆ ಕೋರಿ ಧರಣಿ ನಡೆಸಿದರು. ಇದೇ ವೇಳೆ ವಿಧಾನಸಭೆ ಕಲಾಪಕ್ಕೆ ಮಾಜಿ ಸಿಎಂ ಹೆಚ್ಡಿಕೆ ಆಗಮಿಸಿದರು. ಬಂದ ಕೂಡಲೇ ಬಿಜೆಪಿ ಧರಣಿಗೆ ಹೆಚ್ಡಿಕೆ ಸಾಥ್ ನೀಡಿದರು.
ಕೊನೆಗೆ ಹಕ್ಕುಚ್ಯುತಿ ಮಂಡನೆಗೆ ಒಪ್ಪಿ ಸ್ಪೀಕರ್ ಅವಕಾಶ ಕೊಟ್ಟರು. ಈ ವೇಳೆ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಹಕ್ಕುಚ್ಯುತಿಗೆ ಪ್ರಸ್ತಾಪಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಬರದ ಚರ್ಚೆ ನಡುವೆ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ ಏಕೆ? ಎಂದು ಪ್ರಶ್ನಿಸಿದರು. ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಾನು ವಿಷಯ ತಿಳಿದು ಅಧಿಕಾರಿಗಳಿಗೆ ಕರೆ ಮಾಡಿದ್ದೆ. ಅದು ಅತಿಕ್ರಮಣ ಜಾಗ ಅಂತ ಅಧಿಕಾರಿಗಳು ಹೇಳಿದ್ರು. ನಂತರ ನಾನು ಹರೀಶ್ ಪೂಂಜಾ ಕರೆ ಮಾಡಿದಾಗಲೂ ಸ್ವೀಕರಿಸಿ ಮಾತಾಡಿದ್ದೆ. ಆದ್ರೆ ಶಾಸಕರು ನನ್ನ ಕರೆ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದನದಲ್ಲಿ ಕೋಲಾಹಲ :ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ಹರೀಶ್ ಪೂಂಜಾ ಕಾಲ್ ರೆಕಾರ್ಡ್ ಮಾಡಿದ್ದೂ ಸಹ ಹಕ್ಕುಚ್ಯುತಿ ಅಲ್ವಾ ಅಂತ ಟಾಂಗ್ ನೀಡಿದರು. ಆಗ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ತೀರ್ಪು ಕೊಡಲಿ, ಸಚಿವರ ಸ್ಪಷ್ಟನೆ ಅಗತ್ಯ ಇಲ್ಲ ಅಂತ ಆಗ್ರಹಿಸಿದರು. ಸುನೀಲ್ ಕುಮಾರ್ ಹೇಳಿಕೆಗೆ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು. ಈ ಸಂದರ್ಭ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ಈ ವೇಳೆ ಸದನ ಹಕ್ಕುಚ್ಯುತಿ ಬಗ್ಗೆ ತೀರ್ಮಾನಿಸಲಿದೆ. ಆದರೆ ನಾನು ಪ್ರಕರಣದ ಮಾಹಿತಿ ಪಡೆಯಬೇಕಲ್ಲ ಎಂದು ಸ್ಪೀಕರ್ ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯರು ಮತ್ತೆ ಸದನದ ಬಾವಿಗೆ ಇಳಿದು ಮತ್ತೆ ಧರಣಿ ಆರಂಭಿಸಿದರು. ಹಕ್ಕುಚ್ಯುತಿಗೆ ತೀರ್ಪು ಕೈಗೊಳ್ಳುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು.
ಬಳಿಕ ಸ್ಪೀಕರ್ ಯು ಟಿ ಖಾದರ್, ಹಕ್ಕುಚ್ಯುತಿ ವಿಚಾರವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುವುದಾಗಿ ರೂಲಿಂಗ್ ಕೊಟ್ಟರು. ಈ ವೇಳೆ ಅಧಿಕಾರಿಗಳ ಅಮಾನತ್ತಿಗೆ ಬಿಜೆಪಿ ಆಗ್ರಹಿಸಿತು. ಈ ವೇಳೆ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ವಜಾ ಮಾಡಲು ಆರ್ ಅಶೋಕ್ ಆಗ್ರಹಿಸಿದರು. ಅಧಿಕಾರಿಗಳಿಂದ ವರದಿ ಬಂದ ನಂತರ ಪರಿಶೀಲಿಸೋದಾಗಿ ತಿಳಿಸಿದರು.
ಹಕ್ಕುಚ್ಯುತಿ ಮಂಡಿಸಿದ ಹರೀಶ್ ಪೂಂಜಾ: ಈ ವೇಳೆ ಆರ್‌ಎಫ್ಒ, ಡಿಎಫ್ಒ, ಇತರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಹರೀಶ್ ಪೂಂಜಾ, ಸಾರ್ವಜನಿಕವಾಗಿ ಅಸಭ್ಯವಾಗಿ ಮಾತಾಡಿ ತಮ್ಮ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿದರು. ಹರೀಶ್ ಪೂಂಜಾ ಆಗ್ರಹಕ್ಕೆ ಮೇಜು ತಟ್ಟಿ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು.
ಈ ವೇಳೆ ಸ್ಪೀಕರ್ ಯು ಟಿ ಖಾದರ್ ಪರಿಶೀಲನೆ ನಡೆಸಿ ವರದಿ ಕೊಡುವಂತೆ ಸೂಚಿಸಿದರು. ಶಾಸಕರ ಹಕ್ಕುಚ್ಯುತಿ ಯಾರೂ ಕೂಡಾ ಸಹಿಸಲ್ಲ. ಅದನ್ನು ಪರಿಶೀಲನೆ ನಡೆಸುವುದು ಸದನದ ಜವಾಬ್ದಾರಿ ಎಂದು ತಿಳಿಸಿದರು.
ಇದನ್ನೂ ಓದಿ :ಅಬಕಾರಿ ಸಿಎಲ್ 7 ಪರವಾನಗಿ ಅಕ್ರಮ: ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ