ಅಥಣಿ: ಬೆಳಗಾವಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಶನಿವಾರ ಹ್ಯಾಂಡ್ ಗ್ರೇನೆಡ್ ಬಾಂಬ್ ದೊರೆತಿದೆ. ಇದು ಗಡಿಭಾಗವಾದ ಅಥಣಿಯಲ್ಲೂ ಆತಂಕಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳು ಬಾಲ್ ಎಂದುಕೊಂಡು ಆಟವಾಡುತ್ತಿರುವುದನ್ನು, ಗಮನಿಸಿದ ಕೆಲವು ಗ್ರಾಮಸ್ಥರು ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ತಕ್ಷಣ ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿ, ಹ್ಯಾಂಡ್ ಗ್ರೇನೆಡ್ ಬಾಂಬ್ ವಶಕ್ಕೆ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿದ್ದು, ಹ್ಯಾಂಡ್ ಗ್ರೇನೆಡ್ ಬಿಟ್ಟರೆ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.