ಬೆಳಗಾವಿ: ರೈತರ ವಿರೋಧದ ನಡುವೆಯೂ ಮತ್ತೆ ಹಲಗಾ - ಮಚ್ಛೆ ಬೈಪಾಸ್ ಕಾಮಗಾರಿ ಆರಂಭವಾಗಿದೆ. ತಾಲೂಕಿನ ಮಚ್ಚೆ-ಹಲಗಾ ಗ್ರಾಮದ ನಡುವೆ ಕಾಮಗಾರಿ ಪುನರಾರಂಭವಾಗಿದ್ದು, ಕಾಮಗಾರಿ ಆರಂಭವಾಗುತ್ತಿದ್ದಂತೆ ರೈತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಲು ಮುಂದಾದರು.
ಮತ್ತೆ ಶುರುವಾದ ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ರೈತ ಹೋರಾಟಗಾರ ಪ್ರಕಾಶ್ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕಾಮಗಾರಿ ಅಡ್ಡಿ ಪಡಿಸಲು ರೈತರು ಯತ್ನಿಸಿದ್ದ ವೇಳೆ ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ, ರೈತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಪ್ಪತ್ತಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದರು. ಪೊಲೀಸ್ ಭದ್ರತೆಯಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಮುಂದುವರಿದಿದೆ.
ಓದಿ:ಬೆಳಗಾವಿ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭಾರಿ ವಿರೋಧ: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೈತ!
ಏನಿದು ಪ್ರಕರಣ: ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಳೆದ ನವಂಬರ್ನಲ್ಲಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ, ರೈತರು ಕಾಮಗಾರಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ವೇ ಮಾಡಿದ ಜಮೀನು ಅಲ್ಲದೇ ಫಲವತ್ತಾದ ಕೃಷಿ ಭೂಮಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ರೈತರು ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದರು.
ಓದಿ:ಬೆಳಗಾವಿಯಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ.. ಜೆಸಿಬಿಗೆ ಕಲ್ಲೆಸೆಯಲು ಯತ್ನಿಸಿದ ರೈತರು ಪೊಲೀಸ್ ವಶಕ್ಕೆ
ಈ ವೇಳೆ, ಬೆಳಗಾವಿ ನಗರದ ಹೊರವಲಯದಲ್ಲಿ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಯಿತು. ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ರೈತನ ಮಗನೊಬ್ಬ ಮರವೇರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದರು. ಇನ್ನೊಬ್ಬ ರೈತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಸಹ ನಡೆದಿತ್ತು. ಅಲ್ಲದೇ, ಇನ್ನೊಬ್ಬ ರೈತ ಕೈಯಲ್ಲಿ ಕುಡುಗೋಲು ಹಿಡಿದು ಕತ್ತು ಕುಯ್ದುಕೊಳ್ಳಲು ಯತ್ನಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಮತ್ತೆ ಕಾಮಗಾರಿ ಆರಂಭಿಸಿದ ಜೆಸಿಬಿ ಮೇಲೆ ರೈತರು ಕಲ್ಲೆಸೆಯಲು ಯತ್ನಿಸಿದ್ದರು.
ಓದಿ:ಹಲಗಾ - ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ: ಕಾಮಗಾರಿ ತಡೆಯಲು ರೈತರಿಂದ ಮತ್ತೆ ಯತ್ನ
ನವಂಬರ್ 16ರಂದು ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್ ಜೊತೆಗೂ ರೈತರು ವಾಗ್ವಾದ ನಡೆಸಿದ್ದರು. ರೈತರ ವಿರೋಧದ ನಡುವೆಯೂ 6ನೇ ದಿನದ ಕಾಮಗಾರಿ ಮುಂದುವರೆದಿತ್ತು. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನಿಗೆ ಗುಂಟೆಗೆ 85 ಸಾವಿರ ರೂ. ಪರಿಹಾರ ನೀಡಲಾಗಿದೆ. ಇಲ್ಲಿ ಸದ್ಯ ಪ್ರತಿ ಗುಂಟೆ ಜಮೀನಿಗೆ 10 ಲಕ್ಷ ರೂಪಾಯಿ ಇದೆ. ಪರಿಹಾರ ಹೆಚ್ಚಳ ಮಾಡುವಂತೆ ರೈತರು ಒತ್ತಾಯಿಸಿದ್ದರು. ಈಗ ರೈತರ ವಿರೋಧದ ನಡುವೆಯೂ ಮತ್ತೆ ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ಆರಂಭವಾಗಿದೆ.