ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಡಾ ಹನುಮಂತಗೌಡ ಬೆಳಗಾವಿ :ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ಅತಿಥಿ ಉಪನ್ಯಾಸಕರ ಜೀವನವೇ ಅಭದ್ರವಾಗಿದೆ. ಸೇವಾ ಭದ್ರತೆ ಈ ಬಾರಿಯೂ ಸಿಗದಿದ್ದರೆ ನಾವು ಆತ್ಮಹತ್ಯೆಯ ದಾರಿ ತುಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯದ 430ಕ್ಕೂ ಅಧಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಅತ್ಯಂತ ಕಡಿಮೆ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಸಾವಿರಾರು ಉಪನ್ಯಾಸಕರು ವಯೋಮಿತಿ ಮೀರಿದ ಮತ್ತು ಮೀರುತ್ತಿರುವವರೂ ಇದ್ದಾರೆ. ಹಾಗಾಗಿ, ಅತಿಥಿ ಉಪನ್ಯಾಸಕರ ಬದುಕು ಸೇವಾಭದ್ರತೆ ಇಲ್ಲದೇ ಅಭದ್ರತೆಯಲ್ಲಿದೆ.
ವೃತ್ತಿಯಲ್ಲಿ ಸಾಕಷ್ಟು ಪ್ರತಿಭಾವಂತ, ಅರ್ಹರು ಮತ್ತು ಬೋಧನಾ ಕೌಶಲ್ಯವುಳ್ಳ ಅಭ್ಯರ್ಥಿಗಳು ಇದ್ದರೂ ಸಹ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಿದೆ. ಅತ್ಯಂತ ಕಡಿಮೆ ವೇತನ, ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿಯಾಗಲ್ಲ. ವರ್ಷಪೂರ್ತಿ ಕೆಲಸ ಸಿಗುತ್ತಿಲ್ಲ. ಇದರಿಂದ ಅತಿಥಿ ಉಪನ್ಯಾಸಕರು ಪ್ರತಿನಿತ್ಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಆತಂಕ ಮತ್ತು ಅಭದ್ರತೆಯಲ್ಲೆ ಕಾಲ ದೂಡುವಂತಾಗಿದೆ.
ಅತಿಥಿ ಉಪನ್ಯಾಸಕ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತ ಗೌಡ ಕಲಮನಿ ಈಟಿವಿ ಭಾರತ್ ಜೊತೆಗೆ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಅತಿಥಿ ಉಪನ್ಯಾಸಕರಿಗೆ 10 ತಿಂಗಳ ವೇತನ ಸಿಗುತ್ತಿತ್ತು. ಆದರೆ, ಈಗಿನ ಸರ್ಕಾರ ಅದನ್ನು ಬದಲಿಸಿ, ಸೆಮಿಸ್ಟರ್ ಇದ್ದಾಗ ಮಾತ್ರ ಕೆಲಸ ನೀಡಿ, ಕೇವಲ ಐದಾರು ತಿಂಗಳ ವೇತನ ಮಾತ್ರ ನೀಡುತ್ತಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ ದಿನಕ್ಕೊಂದು ಅವೈಜ್ಞಾನಿಕ ಮತ್ತು ದ್ವಂದ್ವ ಆದೇಶಗಳನ್ನು ನೀಡುವ ಮೂಲಕ ನಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳು 21ನೇ ತಾರೀಖಿನ ಸಭೆಯಲ್ಲಿ ಮುಖ್ಯಮಂತ್ರಿಗಳು ನಮಗಾದ ಅನ್ಯಾಯ ಸರಿಪಡಿಸದಿದ್ದರೆ ಉನ್ನತ ಶಿಕ್ಷಣ ಇಲಾಖೆ ಮತ್ತು ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಮುಂದೆ ಧರಣಿ ನಡೆಸುವುದು ನಿಶ್ಚಿತ ಎಂದು ಹೇಳಿದರು.
ಅತಿಥಿ ಉಪನ್ಯಾಸಕಿ ಪ್ರಜ್ವಲರಾಣಿ ಬೋಗಾರ ಮಾತನಾಡಿ, 13 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಈ ವರ್ಷ ಇನ್ ವ್ಯಾಲಿಡ್ ಮಾರ್ಸ್ ಎಂದು ಹೇಳಿ ನನ್ನ ಸೇರಿಸಿಕೊಂಡಿಲ್ಲ. ವಿಶ್ವವಿದ್ಯಾಲಯಕ್ಕೆ ಹೋಗಿ ಅಂಕಪಟ್ಟಿ ತಿದ್ದಿಕೊಂಡು ಬನ್ನಿ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾಗಿ, ನಮಗೆ ಸೇವಾ ಭದ್ರತೆ ನೀಡಿ, ನಮ್ಮನ್ನು ಬದುಕಿಸಿ ಎಂದು ಕೇಳಿಕೊಂಡರು.
ಡಾ. ಪದ್ಮಾ ಹೊಸಕೋಟಿ ಮಾತನಾಡಿ, ನಮ್ಮ ಜೀವನಕ್ಕೆ ಒಂದು ಭದ್ರತೆ ಇಲ್ಲದಿರುವಾಗ ನಾವು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸುವುದು. ಸೇವಾ ಭದ್ರತೆ ಕೊಡಿ, ಇಲ್ಲವಾದರೆ ಈ ಅತಿಥಿ ಉಪನ್ಯಾಸಕರ ವ್ಯವಸ್ಥೆಯನ್ನೆ ತೆಗೆದು ಹಾಕಿ. ಪ್ರಾಚಾರ್ಯರ ಮೂಲಕ ನಮಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ಇದರಿಂದಲೇ ಸಿಂಧನೂರಿನಲ್ಲಿ ಓರ್ವ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡರು. ನಮ್ಮನ್ನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತರಬೇಡಿ ಎಂದು ಅಲವತ್ತುಕೊಂಡರು.
ಇದನ್ನೂ ಓದಿ:9 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ತಾರಾ?: ಶಿಕ್ಷಣ ಇಲಾಖೆ ಆಯುಕ್ತರ ಸ್ಪಷ್ಟನೆ ಹೀಗಿದೆ