ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪಕ್ಕೆ ಭೇಟಿ ನೀಡಿದ ನೂತನ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ : ಚುನಾವಣೆಯಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಚಿವರಾದ ಬಳಿಕ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರು ಶ್ರೀಮಠದ ನಿಜಗುಣಾನಂದ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿದೆ. ನಾವು ಜಾರಿಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಮಾತನಾಡಿದ ಸತೀಶ್ ಜಾರಕಿಹೊಳಿ, ಸ್ವಾಮೀಜಿಗಳ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬೈಲೂರು ಮಠಕ್ಕೆ ಬಂದಿದ್ದೇನೆ. ನಿಜಗುಣಾನಂದ ಸ್ವಾಮೀಜಿ ಹಾಗೂ ನಮ್ಮ ಹೋರಾಟ ಒಂದೇ. ಸ್ವಾಮೀಜಿ ಜೊತೆಗೂಡಿ ಸಾಕಷ್ಟು ಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ಸ್ವಾಮೀಜಿಗೆ ಮತ್ತಷ್ಟು ಶಕ್ತಿ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಬಸವೇಶ್ವರ, ಬುದ್ಧ, ಅಂಬೇಡ್ಕರ್ ವಿಚಾರವನ್ನು ಎಲ್ಲೆಡೆ ತಲುಪಿಸಬೇಕು. ಐದು ವರ್ಷ ಕಾಲ ನಮ್ಮ ಸರ್ಕಾರ ಬಂದಿದೆ. ಈ ವಿಚಾರ ತಲುಪಿಸುವ ಕಾರ್ಯ ಮಾಡುತ್ತೇವೆ. ಹಿಂದಿನಿಂದಲೂ ನಾನು ಮಾನವ ಬಂಧುತ್ವ ವೇದಿಕೆ ಮೂಲಕ ಈ ಕೆಲಸ ಮಾಡಿದ್ದೇನೆ. ನಿಜಗುಣಾನಂದ ಸ್ವಾಮೀಜಿ ಕೂಡ ಹೋರಾಟ ಮಾಡಿದ್ದಾರೆ. ನಾವೂ ಅವರಿಗೆ ಕೈ ಜೋಡಿಸಿದ್ದೇವೆ. ನಮ್ಮ ಸರ್ಕಾರ ಬಸವೇಶ್ವರರ ವಿಚಾರಧಾರೆಯಲ್ಲಿ ನಡೆಯುತ್ತದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಎಲ್ಲ ಕಚೇರಿಗಳಲ್ಲಿ ಬಸವಣ್ಣನ ಫೋಟೊ ಹಾಕಿತ್ತು. ಬಸವಣ್ಣನನ್ನು ವಿಶ್ವಗುರು ಅಂತಾರೆ, ಆದರೆ ಅವರನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಿಲ್ಲ. ಬಸವಣ್ಣನನ್ನು ಅರಿತರೆ ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಿಜಗುಣಾನಂದ ಸ್ವಾಮೀಜಿಗಳ ವೈಚಾರಿಕ ಹೋರಾಟ ಇನ್ನೂ ಹೆಚ್ಚಾಗಲಿ. ನಮ್ಮ ಸಹಕಾರವೂ ಅವರಿಗೆ ಇದ್ದೇ ಇರುತ್ತದೆ ಎಂದು ಹೇಳಿದರು.
ಹೂಗುಚ್ಚ ನೀಡಿ ಮಠಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬರಮಾಡಿಕೊಂಡ ನಿಜಗುಣಾನಂದ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಬಸವೇಶ್ವರ, ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿದರು. ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಇದ್ದರು.
ಕಿತ್ತೂರಿನಲ್ಲಿ ಅದ್ಧೂರಿ ಸ್ವಾಗತ: ಸಚಿವರಾದ ಬಳಿಕ ಐತಿಹಾಸಿಕ ಕಿತ್ತೂರು ಪಟ್ಟಣಕ್ಕೆ ಮೊದಲ ಬಾರಿ ಭೇಟಿ ನೀಡಿದ ಸತೀಶ್ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಳೆಗೈದರು. ಸತೀಶ್ ಜಾರಕಿಹೊಳಿ ಅವರನ್ನು ಕಿತ್ತೂರಿಗೆ ಬಾಬಾಸಾಹೇಬ್ ಪಾಟೀಲ ಸ್ವಾಗತಿಸಿದರು. ಬಳಿಕ ಪಟ್ಟಣದ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಜಿ.ಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಉಪಸ್ಥಿತರಿದ್ದರು.
ಇದನ್ನೂ ಓದಿ :ಗ್ಯಾರಂಟಿಗಳ ಜಾರಿ, ಲೋಕಸಭೆ ಎಲೆಕ್ಷನ್ ಮೇಲೆ ಕಣ್ಣು: ಹೊಸ ಸಚಿವರಿಗೆ ಸಿದ್ದರಾಮಯ್ಯ ಟಾರ್ಗೆಟ್