ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಬೆಳಗಾವಿಯ ಮಹಿಳೆಯರು ಹರ್ಷ ಬೆಳಗಾವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಮೈಸೂರಿನಲ್ಲಿ ಬುಧವಾರ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಇದಕ್ಕೆ ಬೆಳಗಾವಿಯ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಹುಪರಾಕ್ ಹಾಕಿದ್ದು, ಒಂದಿಷ್ಟು ಮಹಿಳೆಯರು ಆ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುತ್ತೇವೆ ಎಂದರೆ, ಮತ್ತೊಂದಿಷ್ಟು ಮಹಿಳೆಯರು ಪುರುಷರ ಮೇಲೆ ಅವಲಂಬನೆ ಆಗುವುದು ಕಡಿಮೆ ಆಗುತ್ತದೆ ಎಂದಿದ್ದಾರೆ.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಬೆಳಗಾವಿ ನಿವಾಸಿ ಸವಿತಾ ಸಾತ್ಪುತೆ, ರಾಜ್ಯದ ಎಲ್ಲ ಮಹಿಳೆಯರ ಪರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಅನುಕೂಲ ಆಗುತ್ತಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ನನ್ನ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುತ್ತೇನೆ. ಮಕ್ಕಳ ಭವಿಷ್ಯ ಚೆನ್ನಾಗಿ ನಿರ್ಮಾಣವಾದರೆ ನಮ್ಮ ಭವಿಷ್ಯವೂ ಚೆನ್ನಾಗಿರುತ್ತದೆ. ಆದ್ದರಿಂದ ಎಲ್ಲರೂ ಆ ಹಣವನ್ನು ಮಕ್ಕಳ ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಹಿಂಡಲಗಾ ನಿವಾಸಿ ಮನಸ್ವಿ ಮಹಾದೇವ ದಡ್ಡಿಕರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಹಕ್ಕಾಗಿದೆ. ಇದರಿಂದ ನಮ್ಮ ಯಜಮಾನರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಮನೆಯ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಬಹುದು. ಮಕ್ಕಳಿಗೆ ಬೇಕಾದ ವಸ್ತು ಕೊಡಿಸಬಹುದು. ನಮ್ಮದು ಎಂದು ಒಂದು ಖಾತೆ ಇರುತ್ತದೆ. ಹೀಗೆ ಈ ಗ್ಯಾರಂಟಿ ಯೋಜನೆಗಳು ನಮಗೆ ಸಿಗಬೇಕು ಎಂದು ಆಶಿಸಿದರು.
ಇದನ್ನೂ ಓದಿ :ರಾಹುಲ್ ಗಾಂಧಿಗೆ ಚಾಮುಂಡೇಶ್ವರಿ ವಿಗ್ರಹ, ರಾಖಿ, ಗೌರಿ ಗಣೇಶ ಹಬ್ಬದ ಬಾಗಿನ ನೀಡಿ ಸ್ವಾಗತಿಸಿದ ಕೆಪಿಸಿಸಿ ಮಹಿಳಾ ಘಟಕ
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತೆ ಆಯಿಷಾ ಸನದಿ ಮಾತನಾಡಿ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕಣ್ಣು ಬಿಟ್ಟು ನೋಡಬೇಕು. ಯಾಕೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಬಿಟ್ಟಿ ಸರ್ಕಾರ ಎಂದೆಲ್ಲಾ ಟೀಕೆ ಮಾಡಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಬಿಜೆಪಿಯವರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಷ್ಟೇ ಅಲ್ಲದೇ ಬರುವ 15 ವರ್ಷ ಇದೇ ಸರ್ಕಾರ ಅಧಿಕಾರದಲ್ಲಿ ಇರಲಿ. ಈ ಮೂಲಕ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಫರೀದಾ ನದಾಫ ಎಂಬುವರು ಮಾತನಾಡಿ, 2000 ರೂ. ನೀಡುತ್ತಿರುವುದರಿಂದ ನಮಗೆ ತುಂಬಾ ಖುಷಿಯಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಬಹಳಷ್ಟು ಸಮಸ್ಯೆಯಾಗಿತ್ತು. ಈಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಜೀವನ ಮಾಡಲು ಅನುಕೂಲ ಆಗುತ್ತಿದೆ. ಬಡವರ ಪರವಾಗಿ ಯೋಜನೆ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ಹೆಚ್ಚಿಗೆ ಕಾಲ ಅಧಿಕಾರದಲ್ಲಿ ಇರಲಿ ಎಂದು ಹಾರೈಸಿದರು.
ಇದನ್ನೂ ಓದಿ :ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ