ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಸುರಿಯುವ ಮಳೆಯಲ್ಲೇ ಮಹಿಳೆಯರು ಗಂಟೆಗಟ್ಟಲೇ ನಿಂತಿರುವುದು ನಗರದ ರಿಸಾಲ್ದಾರ್ ಗಲ್ಲಿಯ ಬೆಳಗಾವಿ ಒನ್ ಕೇಂದ್ರದಲ್ಲಿ ಕಂಡು ಬಂತು. ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ ಸಿಕ್ಕ ದಿನದಿಂದಲೂ ಇಲ್ಲಿನ ಬೆಳಗಾವಿ ಒನ್ ಕೇಂದ್ರದಲ್ಲಿ ಮಹಿಳೆಯರ ದಟ್ಟಣೆ ನಿತ್ಯವೂ ಇದ್ದು, ಮಂಗಳವಾರ ಸಹ ಸುರಿವ ಮಳೆ ಲೆಕ್ಕಿಸದೇ ಛತ್ರಿ ಹಿಡಿದುಕೊಂಡು ಸಾಲಿನಲ್ಲಿ ನಿಂತ ಮಹಿಳೆಯರು ತಮ್ಮ ಸರದಿ ಯಾವಾಗ ಬರುತ್ತೊ ಎಂದು ಕಾಯುತ್ತಾ ನಿಂತಿದ್ದರು.
ಸರ್ವರ್ ಸಮಸ್ಯೆಯಿಂದಾಗಿ ಬೆಳಗ್ಗೆ 9 ಗಂಟೆಗೆ ಬಂದಿದ್ದ ಮಹಿಳೆಯರು ತಮ್ಮ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಮಧ್ಯಾಹ್ನದ ವರೆಗೂ ಕಾಯಬೇಕಾಯಿತು. ಒಬ್ಬೊಬ್ಬರು ಕಮ್ಮಿ ಎಂದರೂ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಮಹಿಳೆಯರು, ವೃದ್ಧರು ಮಳೆಯಲ್ಲಿ ನೆನೆದುಕೊಂಡೇ ನಿಂತಿದ್ದರು. ಸರ್ಕಾರ ಕೊಡುವ ಎರಡು ಸಾವಿರ ರೂಪಾಯಿಗಾಗಿ ನಾವು ಇಷ್ಟೆಲ್ಲ ಕಷ್ಟ ಪಡಬೇಕು ಎಂದು ಕೆಲ ಮಹಿಳೆಯರು ಗೊಣಗುತ್ತಿರುವ ದೃಶ್ಯವೂ ಕಂಡು ಬಂತು.
ಇದೇ ವೇಳೆ, ಈ ಟಿವಿ ಭಾರತ ಜೊತೆಗೆ ಶಾಹುನಗರ ನಿವಾಸಿ ಶ್ವೇತಾ ಜೋಳದ ಮಾತನಾಡಿ, ಮನೆಗೆಲಸ ಬಿಟ್ಟು ಬೆಳಗ್ಗೆ 8 ಗಂಟೆಯಿಂದ ನಂಬರ್ ಹಚ್ಚಿದ್ದೇವೆ. ನಿರಂತರವಾಗಿ ಮಳೆ ಸುರಿಯುತ್ತಿದೆ. ಇಂತಹುದರಲ್ಲಿ ಇಲ್ಲಿ ನೋಡಿದರೆ ಫುಲ್ ರಶ್ ಆಗಿದೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಬೇಕು. ಮನೆಯವರು ಡ್ಯೂಟಿಗೆ ಹೋಗಿದ್ದಾರೆ. ಹಾಗಾಗಿ ಆದಷ್ಟು ಬೇಗ ನಮ್ಮ ಅರ್ಜಿ ನೋಂದಣಿ ಮಾಡಿಕೊಂಡರೆ ಅನುಕೂಲ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾರಿಹಾಳದಿಂದ ಆಗಮಿಸಿದ್ದ ಬಸವ್ವ ಯಲ್ಲಾಪುರ ಮಾತನಾಡಿ, ಬೆಳಗ್ಗೆ 9 ಗಂಟೆಗೆ ಬಂದಿದ್ದೇವೆ. ಮೊದಲೇ ನಮಗೆ ಶುಗರ್ ಇದೆ. ಹೊಟ್ಟೆ ಹಸಿದು ತಲೆ ಚಕ್ರ ಬಂದು ಬಿದ್ದರೆ ಏನು ಮಾಡೋದು ಎಂದು ತಮ್ಮ ಅಳಲು ತೋಡಿಕೊಂಡರು.
ಇನ್ನು ಬೆಳಗಾವಿ ಒನ್ ಕೇಂದ್ರದ ಮ್ಯಾನೇಜರ್ ಮಲ್ಲಿಕಾರ್ಜುನ ಅವರನ್ನು ಮಾತನಾಡಿಸಿದಾಗ, ಸರ್ವರ್ ಸ್ಲೋ ಆಗಿರುವುದರಿಂದ ಇಷ್ಟೆಲ್ಲ ಸಮಸ್ಯೆ ಆಗಿದೆ. ಹಾಗಾಗಿ ಕಂಪ್ಯೂಟರ್ ಬದಲು ಮೊಬೈಲ್ ಮೂಲಕ ಅರ್ಜಿ ಹಾಕುತ್ತಿದ್ದೇವೆ. ಸರ್ವರ್ ಸರಿ ಇದ್ದರೆ ದಿನಕ್ಕೆ 1 ಸಾವಿರ ವರೆಗೆ ಅರ್ಜಿ ಹಾಕುತ್ತೇವೆ. ಸರ್ವರ್ ಸಮಸ್ಯೆಯಿಂದಾಗಿ 500 ಹಾಕುತ್ತಿದ್ದೇವೆ. ಅರ್ಜಿ ಹಾಕಲು ಇವತ್ತೆ ಕೊನೆ ದಿನ ಎನ್ನುವ ಹಾಗೆ ಜನ ಬಹಳಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ಇದರಿಂದ ರಶ್ ಆಗಿದೆ ಎಂದು ಹೇಳಿದರು.
ಇದನ್ನೂಓದಿ:ಸೋರುತಿಹುದು ಹಾವೇರಿ ಜಿಲ್ಲಾಸ್ಪತ್ರೆಯ ಮಾಳಿಗೆ... ಆರೋಗ್ಯ ಇಲಾಖೆ ಮುಖ್ಯ ಎಂಜಿನಿಯರ್ ಅಮಾನತು ಮಾಡುವಂತೆ ಸಿಎಂ ಸೂಚನೆ..!