ಬೆಳಗಾವಿ: ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡವನ್ನು ತ್ರಿವಳಿ ನಗರ ಮಾಡಲು ಅನುಕೂಲವಾಗಿರುವ ಹಾಗೂ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತು ಬೆಳಗಾವಿಯ ಕಾಡಾ ಕಚೇರಿಯಲ್ಲಿ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಇಲಾಖೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಬೆಳಗಾವಿ ಧಾರವಾಡ-ಕಿತ್ತೂರು 73 ಕಿ.ಮೀ ರೈಲು ಮಾರ್ಗ ಯೋಜನಾ ವರದಿಗೆ ಒಪ್ಪಿಗೆ ದೊರೆತಿದೆ. 927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸಂಸತ್ ಅಧಿವೇಶನ ಬಳಿಕ ಈ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು. ಉತ್ತರ ಕರ್ನಾಟಕ ಭಾಗದ ದಶಕದ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದರು.