ಬೆಳಗಾವಿ:ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಇಂದು ಶೃಂಗೇರಿ ಶಾಸಕ ರಾಜೇಗೌಡ ಅವರು ಹಕ್ಕುಚ್ಯುತಿ ಮಂಡಿಸಿದ ವಿಷಯದಲ್ಲಿ ಅವರ ಮಾತಿಗೆ ದನಿಗೂಡಿಸಿದ ಸಿದ್ದರಾಮಯ್ಯ, ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ. ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ. ಬಜೆಟ್ಗೆ ಅನುಮೋದನೆ ನೀಡುವವರು ಯಾರು? ಚುನಾವಣೆಯಲ್ಲಿ ಸೋತವರು ಬಂದು ಚರ್ಚಿಸಿ ಬಜೆಟ್ ಪಾಸ್ ಮಾಡಿ ಕೊಡುತ್ತಾರಾ? ಸೋತವರ ಹೆಸರಿಗೆ ಅನುದಾನ ನೀಡಿ ನೀವು ಜನರ ಜೊತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಯಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜೊತೆ ನಿಂತು ಕೆಲಸ ಮಾಡಲಿ. ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿದ ನೆನಪಿಲ್ಲ ಎಂದರು.
ನಿಮ್ಮ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್ ಅವರಿಗೆ ಹಿಂದೆ ನಾನು ಅನುದಾನ ನೀಡಿದ್ದೆನಾ ಎಂದು ಸ್ಪೀಕರ್ ಅವರನ್ನೇ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು. ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿ ನಡವಳಿಕೆಗೆ ಅವಕಾಶ ಇಲ್ಲ. ಇದು ರಾಜೇಗೌಡರಿಗೆ ಮಾತ್ರವಲ್ಲ, ಖಾದರ್ ಅವರಿಗೂ ಸೇರಿದಂತೆ ಬಹಳಷ್ಟು ಜನರಿಗೆ ಈ ರೀತಿ ಅನ್ಯಾಯ ಆಗಿದೆ. ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ. ಅವರು ಹಿರಿಯ ಸದಸ್ಯರು ಕೂಡ ಹೌದು. ಇದನ್ನು ಪ್ರಿವಿಲೇಜ್ ಕಮಿಟಿಗೆ ಕಳಿಸುವ ಬದಲು ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರ ಉತ್ತರಿಸ ಬೇಕು ಎಂದು ಒತ್ತಾಯಿಸಿದರು.