ಬೆಳಗಾವಿ: ಗ್ರಾಮ ಒನ್ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಗ್ರಾಮ ಒನ್ ಕೇಂದ್ರದ ಆಪರೇಟರ್ಗಳು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಕೇಂದ್ರ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸಲ್ಲಿಕೆಯಲ್ಲಿ ಹಣ ವಸೂಲಿ ಆರೋಪದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸೀಜ್ ಮಾಡಿ ಕೇಸ್ ದಾಖಲಿಸಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಗ್ರಾಮ ಒನ್ ಮಾಲೀಕರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಪ್ರಿಂಟ್, ಲ್ಯಾಮಿನೇಷನ್ ಅಂತಾ ಹಣ ಖರ್ಚಾಗುತ್ತದೆ. ಸರ್ಕಾರದ ಸೇವೆ ಮಾಡುತ್ತಿದ್ದರೂ ಸರ್ಕಾರವೇ ನಮ್ಮ ಮೇಲೆ ಕೇಸ್ ಹಾಕುತ್ತಿದೆ. ಲ್ಯಾಮಿನೇಷನ್, ಪ್ರಿಂಟ್ಗೆ ಅಂತ ಹಣ ಪಡೆದರೂ ಕೆಲವರು ನಮ್ಮ ಮೇಲೆ ದೂರು ನೀಡುತ್ತಿದ್ದಾರೆ. ಅದನ್ನ ಅರ್ಜಿಗೆ ಹಣ ಪಡೆಯುತ್ತಿದ್ದಾರೆ ಎಂದು ಬಿಂಬಿಸಿ ಕೇಸ್ ಹಾಕುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತೇವೆ. ಕೆಲವರು ಗಲಾಟೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಸರ್ಕಾರ ನೀಡುವ ಸಹಾಯ ಧನ 20 ರೂ. ಅದರಲ್ಲಿ ಟ್ಯಾಕ್ಸ್ ತೆಗೆದು 12 ರೂ. ಬರುತ್ತದೆ. ಆ ಹಣ ಕೂಡ ಯಾವಾಗ ಬರುತ್ತೆ ಅಂತಾ ಗೊತ್ತಿಲ್ಲ. ಆದರೂ ಕೆಲಸ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಗೃಹಜ್ಯೋತಿ ನೋಂದಣಿ ಸಲ್ಲಿಕೆಗೂ ಹೀಗೆ ಹೇಳಿದ್ದರು. ಆದರೆ ಇನ್ನೂ ನಮಗೆ ಹಣ ಬಂದಿಲ್ಲ. ಹಾಗಾಗಿ ಗ್ರಾಮ್ ಒನ್ ಬಂದ್ ಮಾಡಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಕೆಲವು ಯೂಟ್ಯೂಬ್ ಚಾನಲ್ನವರು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಸರ್ಕಾರ ನಮಗೆ ನ್ಯಾಯ ಒದಗಿಸಿ 50 ರಿಂದ 100 ರೂಪಾಯಿ ಸಹಾಯ ಧನ ಕೊಡಬೇಕು. ಇಲ್ಲವೇ ಸರ್ಕಾರದಿಂದ ನಮಗೆ ಸಂಬಳ ನೀಡಲಿ ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.