ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಎಂದೇ ಬಿಂಬಿಸಲ್ಪಟ್ಟಿದ್ದ ಬೆಳಗಾವಿಯ ಸುವರ್ಣಸೌಧ ಸರ್ಕಾರದ ಉದಾಸೀನತೆಯಿಂದ ಇದೀಗ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದರೂ ಸರ್ಕಾರ ಮಾತ್ರ ಈ ಭವ್ಯ ಬಂಗಲೆಯ ಸದುಪಯೋಗಕ್ಕೆ ಕೈ ಹಾಕುತ್ತಿಲ್ಲ.
ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂಬ ಕನಸು ಕಂಡಿದ್ದ ಗುರು ಬಿ.ಎಸ್. ಯಡಿಯೂರಪ್ಪ ಕನಸನ್ನು ಅವರ ಶಿಷ್ಯ ಸಿಎಂ ಬಸವರಾಜ್ ಬೊಮ್ಮಾಯಿ ನನಸು ಮಾಡುವರೇ ಎಂಬುದು ಸದ್ಯದ ಕುತೂಹಲ.
ಇದೇ ಶನಿವಾರ ಬೆಳಗಾವಿ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಕಚೇರಿಗಳ ಸ್ಥಳಾಂತರ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.
ದಿಕ್ಸೂಚಿ ಆಗದ ಭವ್ಯ ಬಂಗಲೆ:
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹಗಲು ಗನಸು ಕಾಣುತ್ತ ಗಡಿಯಲ್ಲಿ ಪ್ರತಿಭಟನೆ ನಡೆಸುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಬಾಯಿ ಮುಚ್ಚಿಸಲೆಂದೇ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ತಾರತಮ್ಯ ನೀಗಿಸುವ ಸದುದ್ದೇಶದಿಂದ ಹಿಂದಿನ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿತು.
ಸುವರ್ಣ ಸೌಧ ನಿರ್ಮಿಸಿ ಪ್ರತಿವರ್ಷ ಅಧಿವೇಶನ ಜೊತೆಗೆ ಉಕ ಭಾಗದ ಅಭಿವೃದ್ಧಿಗೆ ಪೂರಕವಾದ ಕಚೇರಿಗಳ ಸ್ಥಳಾಂತರದ ಉದ್ದೇಶವನ್ನು ಬಿಎಸ್‌ವೈ ಹೊಂದಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ನಡೆಯದ ಅಧಿವೇಶನ:
ಈ ಸೌಧ ನಿರ್ಮಾಣದ ಬಳಿಕ ರಾಜ್ಯದಲ್ಲಿ ಸರ್ಕಾರವೂ ಬದಲಾಯಿತು. ನಂತರ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುವರ್ಣ ಸೌಧದಲ್ಲಿ ಪ್ರತಿವರ್ಷ ಅಧಿವೇಶನ ನಡೆಸಿತಾದರೂ ಕಚೇರಿಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಿಲ್ಲ.
ಅಲ್ಲದೇ ಹೆಚ್ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಕೂಡ ಒಂದು ಬಾರಿ ಅಧಿವೇಶನ ನಡೆಸಿತು. ನಂತರ ಬಂದ ಬಿಎಸ್‌ವೈ ನೇತೃತ್ವದ ಸರ್ಕಾರ ಪ್ರವಾಹದ ಹಾಗೂ ಎರಡು ಸಲ ಕೋವಿಡ್ ನೆಪ ಹೇಳಿ ಇಲ್ಲಿ ಅಧಿವೇಶನ ನಡೆಸಲಿಲ್ಲ.