ಚಿಕ್ಕೋಡಿ (ಬೆಳಗಾವಿ) : ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಸಬೇಕು. ನಂತರ ಸರ್ವೇ ಕಾರ್ಯ ಕೈಗೆ ಬರಬೇಕು. ಇದಾದ ಬಳಿಕ ಅದಕ್ಕೆ ಗೈಡ್ಲೈನ್ಸ್ ಫಿಕ್ಸ್ ಮಾಡಿದ ನಂತರವೇ ಎಲ್ಲವೂ ಜಾರಿ ಆಗುತ್ತೆ. ಈಗಾಗಲೇ ಸಚಿವ ಸಂಪುಟ ಇದರ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಅಥಣಿ ಪಟ್ಟಣದ ತಮ್ಮ ಖಾಸಗಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮುಂದಿನ ತಿಂಗಳು ಈ ಗ್ಯಾರಂಟಿ ಯೋಜನೆ ಜಾರಿ ಆಗಬಹುದು. ಎಲ್ಲ ಮಂತ್ರಿಗಳು ಇದರ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಗೆ ಮೊದಲಿಗೆ ಆದ್ಯತೆ ನೀಡಲಾಗಿದೆ. ಸುಮ್ಮನೆ ಈಗ ನಾವು ಮಾತನಾಡುವುದು ಅಪ್ರಸ್ತುತ ಎಂದು ಸವದಿ ಹೇಳಿದರು.
ಸಚಿವ ಸ್ಥಾನ ಕೈ ತಪ್ಪಿರುವ ವಿಚಾರ:ಸಚಿವ ಸ್ಥಾನ ಮಿಸ್ ಆಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇದು ಸಹಜವಾಗಿ ಇರುವುದು. ಒಟ್ಟು ಸಚಿವ ಸ್ಥಾನ 34. ಈ ಬಾರಿ ಕಾಂಗ್ರೆಸ್ನಲ್ಲಿ ಹಳಬರು ಆಯ್ಕೆ ಆಗಿದ್ದಾರೆ. ಅವರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ನಾವು ಈಗ ಅಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಮನುಷ್ಯನಿಗೆ ರಾಜಕಾರಣದಲ್ಲಿ ದೂರದೃಷ್ಟಿ ಹಾಗೂ ತಾಳ್ಮೆ ಬೇಕು. ಇವು ಎರಡು ಇದ್ದರೆ ರಾಜಕಾರಣ ನಡೆಯುತ್ತದೆ. ರಾಜಕಾರಣದಲ್ಲಿ ನನಗೆ ನಿರೀಕ್ಷೆ ಇತ್ತು. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ. ಸಚಿವರಾಗಬೇಕು, ಡಿಸಿಎಂ, ಸಿಎಂ ಆಗ್ಬೇಕು ಎಂದು ಆಸೆ ಇರುತ್ತದೆ. ಮನುಷ್ಯ ಸಹಜವಾಗಿಯೇ ಆಸೆಗಳು ಇರುತ್ತವೆ ಎಂದು ಸವದಿ ಪರೋಕ್ಷವಾಗಿ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.