ಬೆಂಗಳೂರು(ಬೆಳಗಾವಿ):ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 23-11-2023 ರ ವರೆಗೆ ಆನ್‌ಲೈನ್ ಮೂಲಕ 57809 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಕೆ ಅಬ್ದುಲ್ ಜಬ್ಬಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯ ಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಆರಂಭಿಕ ಠೇವಣಿಯನ್ನು ಪಾವತಿಸಿದ ನಂತರ ಫಲಾನುಭವಿಗಳೇ ಸ್ವತಃ ತಮ್ಮ ಫ್ಲಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್-ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
1150 ಪ್ಲಾಟ್ ಗಳಿಗೆ ಪ್ರತ್ಯೇಕ ಇ ಖಾತೆ: ಅದರಂತೆ ಆರಂಭಿಕ ಠೇವಣಿಯನ್ನು ಪಾವತಿಸಿ,11,568 ಫಲಾನುಭವಿಗಳು ಫ್ಲಾಟ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಈ ಯೋಜನೆಯನ್ನು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಈವರೆಗೆ ಪೂರ್ಣಗೊಳಿಸಿರುವ ಒಟ್ಟು 1150 ಪ್ಲಾಟ್ ಗಳಿಗೆ ಪ್ರತ್ಯೇಕ ಇ ಖಾತೆ ಪಡೆಯುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
ಈಗಾಗಲೇ ಇ-ಖಾತೆ ಪಡೆದಿರುವ ಪ್ಲಾಟ್ ಗಳ ಫಲಾನುಭವಿಗಳಿಗೆ ಉಳಿಕೆ ಹಣವನ್ನು ಪಾವತಿಸುವಂತೆ ಬೇಡಿಕೆ ಪತ್ರವನ್ನು ಕಳುಹಿಸಲಾಗಿದ್ದು, ಫಲಾನುಭವಿಗಳು ಪೂರ್ಣ ಹಣವನ್ನು ಪಾವತಿಸಿದ ನಂತರ ಪ್ಲಾಟ್ಗಳನ್ನು ನೋಂದಣಿ ಮಾಡಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ. ಫಲಾನುಭವಿ ವಂತಿಕೆಯನ್ನು ಭರಿಸಲು ಅನುಕೂಲವಾಗುವಂತೆ ಅವರುಗಳಿಗೆ ಬ್ಯಾಂಕ್ ಸಾಲವನ್ನು ಕೊಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 3 ಲಕ್ಷ ಮನೆ ನಿರ್ಮಾಣ ಗುರಿ: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಹಿಂದಿನ ಶ್ರೇಣಿಗಳಲ್ಲಿ ಪ್ರಗತಿಯಲ್ಲಿದ್ದ ಮನೆಗಳನ್ನು ಒಳಗೊಂಡಂತೆ 2023-24 ನೇ ಆರ್ಥಿಕ ವರ್ಷದಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 28-11-2023 ಕ್ಕೆ 1,12,891 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಸುನೀಲ್ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 18,92,756 ವಸತಿ ರಹಿತರು ಹಾಗೂ 7,13,950 ನಿವೇಶನ ರಹಿತರು ಕಂಡು ಬಂದಿರುವರು. ವಸತಿ ರಹಿತ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಗ್ರಾಪಂ/ನಗರ ಸ್ಥಳೀಯ ಸಂಸ್ಥೆಗಳಿಗೆ ಗುರಿ ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುತ್ತಿದೆ. 2020-21 ರಿಂದ 2022-23 ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ ಒಟ್ಟಾರೆ 6,35,412 ಮನೆಗಳ ಗುರಿ ಹಂಚಿಕೆ ಮಾಡಲಾಗಿದೆ. ಈ ವರೆಗೆ 4,07,923 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.