ಕರ್ನಾಟಕ

karnataka

ETV Bharat / state

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 7,800 ಕೋಟಿ ರೂ. ಹಾನಿ : ಗೋವಿಂದ ಕಾರಜೋಳ

ನಿರಂತರ ಮಳೆಯಿಂದ ಚಿಕ್ಕೋಡಿ ವಿಭಾಗದಲ್ಲಿ ತೊಂದರೆಯಾಯಿತು. ಸಕಾಲದಲ್ಲಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಹಾನಿಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು ಎಂದರು. ಅಥಣಿ ಭಾಗದಲ್ಲಿ 22 ಹಳ್ಳಿಗಳು ಜಲಾವೃತಗೊಂಡಿದ್ದವು. 230 ತಾತ್ಕಾಲಿಕ ಶೆಡ್ ನಿರ್ಮಿಸಿ ಜನರಿಗೆ ತುರ್ತು ವಸತಿ ಕಲ್ಪಿಸಲಾಗಿದೆ..

Govinda Karajola meeting
ಗೋವಿಂದ ಕಾರಜೊಳ ಸಭೆ

By

Published : Aug 6, 2021, 5:13 PM IST

ಬೆಳಗಾವಿ :ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಅಗತ್ಯವಿರುವ ಕಡೆಗಳಲ್ಲಿ ‌ಹೊಸದಾಗಿ ಬಡಾವಣೆ ಅಭಿವೃದ್ಧಿಪಡಿಸಿ ನೀರು, ವಿದ್ಯುತ್ ಸೇರಿ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಕೋವಿಡ್ ಹಾಗೂ ಪ್ರವಾಹ ಸ್ಥಿತಿ ನಿರ್ವಹಣೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪುನರ್ವಸತಿ ಕಾಯ್ದೆ ಪ್ರಕಾರ ಸಂತ್ರಸ್ತರಿಗೆ 40x60 ಅಳತೆಯ ನಿವೇಶನದಲ್ಲಿ ಸೂರು‌ ಒದಗಿಸಲು ಸಮರ್ಪಕ ಯೋಜನೆ ರೂಪಿಸಬೇಕು.

ಮುಳುಗಡೆಯಾಗುವ ಗ್ರಾಮಗಳ ಜನರಿಗೆ ತಾತ್ಕಾಲಿಕ ‌ಶೆಡ್ ನಿರ್ಮಿಸಿ ಮೂಲಸೌಕರ್ಯವನ್ನು ಒದಗಿಸಬೇಕು. ಈ ಹಿಂದೆ 2009-10ನೇ ಸಾಲಿನಲ್ಲಿ ಪ್ರವಾಹ ಬಂದಾಗ ಕೆಲ ಗ್ರಾಮಗಳನ್ನು ಸ್ಥಳಾಂತರಿಸಿ 'ಆಸರೆ' ಮನೆಗಳನ್ನು ನೀಡಲಾಗಿತ್ತು. ಈ ಬಗ್ಗೆ ಪರಿಶೀಲಿಸಿ‌ ಮಾಹಿತಿ ಒದಗಿಸಬೇಕು ಎಂದಿದ್ದಾರೆ.

ಆರ್​​​​ಟಿಜಿಎಸ್ ಮೂಲಕ ಪರಿಹಾರ ಪಾವತಿಗೆ ಸೂಚನೆ

ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ 10 ಸಾವಿರ ರೂಪಾಯಿ ಪರಿಹಾರದ ಹಣವನ್ನು ಆರ್​​​ಟಿಜಿಎಸ್ ಮೂಲಕ ಆಯಾ ಕುಟುಂಬಗಳಿಗೆ ಪಾವತಿಸಬೇಕು ಎಂದು ಸೂಚಿಸಿದ್ದಾರೆ.

ಅತಿವೃಷ್ಟಿಯಿಂದ ಒಟ್ಟಾರೆ 7,800 ಕೋಟಿ ಹಾನಿ

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಬೆಳೆ, ರಸ್ತೆ, ಸೇತುವೆ ಇತರ ಮೂಲಸೌಕರ್ಯಗಳು ಸೇರಿದಂತೆ ಒಟ್ಟಾರೆ 7,800 ಕೋಟಿ ರೂಪಾಯಿ ಹಾನಿಯಾಗಿದೆ.
21,300 ವಿದ್ಯುತ್ ಕಂಬಗಳು‌‌ ಹಾಗೂ 5,300 ಟ್ರಾನ್ಸ್ ಫಾರ್ಮರ್ಸ್​ ನೀರಿನಲ್ಲಿ ಮುಳುಗಡೆಯಾಗಿವೆ. ನೀರು ಕಡಿಮೆಯಾದ ಬಳಿಕ ಹಾನಿ‌ ಅಂದಾಜು ಮಾಡಬೇಕು ಎಂದು ತಿಳಿಸಿದರು.

ಮಳೆಯಿಂದ ವಿದ್ಯುತ್ ಪೂರೈಕೆ ತೊಂದರೆ ಆಗದಂತೆ ಕ್ರಮ

ಮಳೆಯಿಂದ ವಿದ್ಯುತ್ ಪೂರೈಕೆ ತೊಂದರೆಯಾದ ಕಡೆಗಳಲ್ಲಿ ತಕ್ಷಣವೇ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು. ಒಂದು ವೇಳೆ ಪ್ರವಾಹ ಉಂಟಾದರೆ ನಂತರದ ದಿನಗಳಲ್ಲಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಅಗತ್ಯ ಪರಿಕರಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ರೈತರಿಗೆ ವಿದ್ಯುತ್ ಟಿಸಿ ಒದಗಿಸುವ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನು ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕೋವಿಡ್ 3ನೇ ಅಲೆ ಸೂಕ್ತ ಸಿದ್ಧತೆಗೆ ಸೂಚನೆ

ಕೋವಿಡ್ ಸಂಭವನೀಯ 3ನೇ ಅಲೆ ಹಿನ್ನೆಲೆ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ಪ್ರಸ್ತಾವ ಸಲ್ಲಿಸಬೇಕು. ಜಿಲ್ಲಾ, ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 418 ಹಾಸಿಗೆಗಳು ಲಭ್ಯವಿವೆ. ಆದರೆ, ತುರ್ತು ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದರು.

ಬಳಿಕ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮಾತನಾಡಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರವಾಹದಿಂದ ಜಿಲ್ಲೆಯಲ್ಲಿ ಬೆಳೆ, ಮೂಲಸೌಕರ್ಯ ಸೇರಿ ಅಂದಾಜು 7,800 ಕೋಟಿ ರೂಪಾಯಿಗಿಂತ ಅಧಿಕ ನಷ್ಟವಾಗಿದೆ. ಸಮೀಕ್ಷೆಯ ಬಳಿಕ ಖಚಿತ ಮಾಹಿತಿ ‌ಲಭಿಸಲಿದೆ.

ನಿರಂತರ ಮಳೆಯಿಂದ ಚಿಕ್ಕೋಡಿ ವಿಭಾಗದಲ್ಲಿ ತೊಂದರೆಯಾಯಿತು. ಸಕಾಲದಲ್ಲಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಹಾನಿಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು ಎಂದರು.

ಅಥಣಿ ಭಾಗದಲ್ಲಿ 22 ಹಳ್ಳಿಗಳು ಜಲಾವೃತಗೊಂಡಿದ್ದವು. 230 ತಾತ್ಕಾಲಿಕ ಶೆಡ್ ನಿರ್ಮಿಸಿ ಜನರಿಗೆ ತುರ್ತು ವಸತಿ ಕಲ್ಪಿಸಲಾಗಿದೆ. ಆಗಸ್ಟ್ 15ರ ವೇಳೆಗೆ ಮಳೆಯಿಂದ ಉಂಟಾಗಿರುವ ಮನೆ, ಬೆಳೆ ಹಾಗೂ ಮೂಲಸೌಕರ್ಯ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಲಾಗುವುದು ಎಂದರು.

ABOUT THE AUTHOR

...view details