ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿ ನಾವಿಕನಿಲ್ಲದ ನೌಕೆಯಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ನಾವಿಕನಿಲ್ಲದ ನೌಕೆಯಂತಾಗಿದೆ ಕಾಂಗ್ರೆಸ್ ಸ್ಥಿತಿ: ಡಿಸಿಎಂ ಕಾರಜೋಳ
ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿ ನಾವಿಕನಿಲ್ಲದ ನೌಕೆಯಂತಾಗಿದೆ. ಲಸಿಕೆ ವಿಷಯದಲ್ಲಿ ನಾವು ತಾರತಮ್ಯ ಮಾಡುತ್ತಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಟೀಕಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ತೀರುಗೇಟು ನೀಡಿರುವ ಕಾರಜೋಳ, ಕಳೆದ ವರ್ಷ ರಾಜ್ಯ ಸರ್ಕಾರ ಘೋಷಿಸಿದ್ದ ಪ್ಯಾಕೇಜ್ ಶೇ 95 ರಷ್ಟು ಫಲಾನುಭವಿಗಳಿಗೆ ತಲುಪಿದೆ. ರಾಜ್ಯ ಸರ್ಕಾರದ ಬಳಿ ಎಲ್ಲ ದಾಖಲೆಗಳು ಇವೆ. ಏನೂ ತಲುಪಿಲ್ಲ ಎಂದರೆ ಯಾವುದೇ ಶಿಕ್ಷೆಗೆ ನಾನು ಸಿದ್ಧ ಎಂದು ಶಾಸಕಿಗೆ ಸವಾಲು ಹಾಕಿದರು. ಕಾಂಗ್ರೆಸ್ ನಾಯಕರು ಹತಾಶರಾಗಿ ಮಾತನಾಡುತ್ತಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಬೇಸ್ ಲೆಸ್ ಆರೋಪ ನಿಲ್ಲಿಸಬೇಕು ಎಂದಿದ್ದಾರೆ.
ಲಸಿಕೆ ವಿತರಣೆಯಲ್ಲಿ ನಾವು ತಾರತಮ್ಯ ಮಾಡುತ್ತಿಲ್ಲ. ಉನ್ನತ ಮಟ್ಟದ ಸಭೆಗೂ ಜಿಲ್ಲೆಯ ಎಲ್ಲ ಶಾಸಕರಿಗೆ ಆಹ್ವಾನ ನೀಡಿದ್ದೇವೆ. ಜಿಲ್ಲೆಗೆ ಮಂಜೂರು ಮಾಡಿರುವ 20 ಟನ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಇಂದು ರಾತ್ರಿ ನಗರಕ್ಕೆ ಬರಲಿದೆ. ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಈ ಆಕ್ಸಿಜನ್ ಪೂರೈಸಲು ನೆರವಾಗಲಿದೆ. ಜಿಲ್ಲೆಗೆ ಟ್ಯಾಂಕರ್ ಮಂಜೂರಾಗಿದಕ್ಕೆ ಆಕ್ಸಿಜನ್ ಅಭಾವ ಸಮಸ್ಯೆ ಬಗೆಹರಿಯಲಿದೆ. ಜಿಂದಾಲ್ ನಿಂದ ಆಕ್ಸಿಜನ್ ಸರಬರಾಜು ಮಾಡಿಕೊಳ್ಳಲು ಈ ಟ್ಯಾಂಕರ್ ನೆರವಾಗಲಿದೆ ಎಂದಿದ್ದಾರೆ.