ಬೆಳಗಾವಿ: ರಾಜ್ಯದ ವಕೀಲರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಬಾರ್ ಕೌನ್ಸಿಲ್‌ನ ಹಿರಿಯ ವಕೀಲರು ಸಿದ್ಧಪಡಿಸಿರುವ ಡ್ರಾಫ್ಟ್ ಬಿಲ್ ಅನ್ನು ಪರಿಶೀಲಿಸಿ ಕಾನೂನು ಅನುಷ್ಠಾನಗೊಳಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ವಕೀಲರುಗಳು ತಮಗೆ ಕಾನೂನಾತ್ಮಕ ರಕ್ಷಣೆ ಬೇಕು ಎಂಬ ಕಾರಣಕ್ಕೆ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನ್ಯಾಯ ಕೊಡಿಸುವ ಮಹತ್ತರ ಕಾಯಕ ನಿರ್ವಹಿಸುತ್ತಿರುವ ಅವರ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ಆಲಿಸಿ, ಆದಷ್ಟು ಶೀಘ್ರವಾಗಿ ಈಡೇರಿಸಬೇಕು ಎಂದರು.
ರಾಜ್ಯದ ವಕೀಲರುಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ಆಗುತ್ತದೆ ಎಂಬ ಕಾರಣಕ್ಕೆ ತಮಗೆ ರಕ್ಷಣೆ ನೀಡುವ ಕಾನೂನು ಬೇಕು ಎಂದು ಬೆಂಗಳೂರು ಬಾರ್ ಕೌನ್ಸಿಲ್ ಅಸೋಸಿಯೇಷನ್‌ನ ಹಿರಿಯ ವಕೀಲರಾದ ಹೊಳ್ಳ ಅವರು, ಹನುಮಂತರಾಯರು, ಪೊನ್ನಣ್ಣನವರು ಸೇರಿಕೊಂಡು ಒಂದು ಕರಡು ಮಸೂದೆಯನ್ನು ತಯಾರು ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರನ್ನು ಭೇಟಿಯಾಗಿ ಮನವಿ ನೀಡಿದ್ದಾರೆ.
ನಿನ್ನೆ ಸುವರ್ಣಸೌಧದ ಮುಂಭಾಗ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಕೀಲರು ನ್ಯಾಯ ಒದಗಿಸಲು ಕಕ್ಷಿದಾರರ ಪರವಾಗಿ ವಾದ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಎದುರಿನವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇಂಥವರಿಗೆ ರಕ್ಷಣೆ ಇಲ್ಲದೆ ಹೋದರೆ ನಿರ್ಭೀತವಾಗಿ ನ್ಯಾಯ ಒದಗಿಸಲು ಕಷ್ಟವಾಗುತ್ತದೆ ಎಂದು ಹೇಳಿದರು.