ಕರ್ನಾಟಕ

karnataka

By

Published : May 14, 2019, 5:54 PM IST

ETV Bharat / state

ಷರತ್ತಿಗೆ ಒಪ್ಪಿದರೂ ನೀರು ಬಿಡದ ಮಹಾ ಸರ್ಕಾರ.. ಕೇಳೋರಿಲ್ಲವೇ ಕೃಷ್ಣಾ ತೀರದ ಜನರ ವ್ಯಥೆ!

ಕೃಷ್ಣಾ ನದಿ ತೀರದಲ್ಲಿ ಬರುವ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಸಾವಿರಾರು ಹಳ್ಳಿಗಳ ಜನರು ನೀರಿಗಾಗಿ ಪ್ರತಿನಿತ್ಯ ಪರದಾಡುವಂತಾಗಿದೆ. ರಾಜ್ಯದಲ್ಲಿನ ಸಮಿಶ್ರ ಸರ್ಕಾರ ಉತ್ತರ ಕರ್ನಾಟಕ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬ ಕೂಗು ಈ ಭಾಗದಲ್ಲಿ ಹರದಾಡುತ್ತಿದೆ.

ಕೇಳೋರಿಲ್ಲವೇ ಕೃಷ್ಣಾ ತೀರದ ಜನರ ವ್ಯಥೆ!

ಚಿಕ್ಕೋಡಿ : ಕಳೆದ 2 ತಿಂಗಳಿನಿಂದ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ಬತ್ತಿ ಬರಿದಾಗಿದೆ. ಕೃಷ್ಣಾ ನದಿ ತೀರದಲ್ಲಿ ಬರುವ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಸಾವಿರಾರು ಹಳ್ಳಿಗಳ ಜನರು ನೀರಿಗಾಗಿ ಪ್ರತಿನಿತ್ಯ ಪರದಾಡುವಂತಾಗಿದೆ. ರಾಜ್ಯದಲ್ಲಿನ ಸಮಿಶ್ರ ಸರ್ಕಾರ ಉತ್ತರ ಕರ್ನಾಟಕ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬ ಕೂಗು ಈ ಭಾಗದಲ್ಲಿ ಹರದಾಡುತ್ತಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕಾಂಗ್ರೆಸ್, ಬಿಜೆಪಿ ಜನಪ್ರತಿನಿಧಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಹಾಗೂ ಅಲ್ಲಿನ ಜಲಸಂಪನ್ಮೂಲ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸೊಲ್ಲಾಪುರ ಹಾಗೂ ಜತ್ತ ತಾಲೂಕಿನ ಕೆಲವು ಪ್ರದೇಶಗಳಿಗೆ ಆಲಮಟ್ಟಿ ಜಲಾಶಯದಿಂದ 2 ಟಿಎಂಸಿ ನೀರು ಹರಿಸಿದರೆ, ಕೋಯ್ನಾದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಕರ್ನಾಟಕ ಸರ್ಕಾರಕ್ಕೆ ಷರತ್ತು ಹಾಕಿದ್ದರು. ಕರ್ನಾಟಕ ರಾಜ್ಯದ ಸಮಿಶ್ರ ಸರ್ಕಾರದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರು ಬೆಳಗಾವಿ ಭಾಗದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆ ಕರೆದು ಪರಸ್ಪರ ನೀರು ಬಿಡುಗಡೆ ಬಗ್ಗೆ ಮಾತುಕತೆ ನಡೆಸಿ ಮಹಾರಾಷ್ಟ್ರದ ಷರತ್ತಿಗೆ ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ ಕೃಷ್ಣಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಭೆ ನಡೆಸಿ 1 ವಾರ ಕಳೆದರೂ ಕೃಷ್ಣಾ ನದಿಗೆ ನೀರು ಮಾತ್ರ ಬಂದಿಲ್ಲ. ಇದರಿಂದಾಗಿ ನದಿ ತೀರದ ಜನರು ಪ್ರತಿನಿತ್ಯ ನೀರು ಇಂದು ಬರುತ್ತೆ, ನಾಳೆ ಬರುತ್ತೆ ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಕೇಳೋರಿಲ್ಲವೇ ಕೃಷ್ಣಾ ತೀರದ ಜನರ ವ್ಯಥೆ!

ಮಹಾರಾಷ್ಟ್ರದ ಷರತ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ ಕೃಷ್ಣಾ ನದಿಗೆ ನೀರು ಏಕೆ ಬರುತ್ತಿಲ್ಲ? ಎಂದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಪ್ರತಿ ವರ್ಷ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿದಾಗಲೆಲ್ಲ ಮಾನವೀಯತೆ ಆಧಾರದ ಮೇಲೆ ನೀರು ಬಿಡುತ್ತಿದ್ದ ಮಹಾರಾಷ್ಟ್ರ ಸರ್ಕಾರ ಈ ಬಾರಿ ರಾಜ್ಯದ ಜನರನ್ನು ಸತಾಯಿಸುತ್ತಿರುವುದು ಎರಡೂ ಸರ್ಕಾರಗಳ ನಡೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದೆ. ನೀರಿಗೆ ನೀರು ಕೊಡುವ ಷರತ್ತಿಗೆ ಎರಡೂ ಸರ್ಕಾರಗಳು ಒಪ್ಪಿಕೊಂಡ ನಂತರವಾದರೂ ಕೃಷ್ಣಾ ನದಿಗೆ ಏಕೆ ನೀರು ಬರುತ್ತಿಲ್ಲ ಎಂದು ಉತ್ತರಕರ್ನಾಟಕದ ಜನರು ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಮುಖ್ಯಮಂತ್ರಿ ಕುಮಾರಾಸ್ವಾಮಿ ಕೃಷ್ಣಾ ನದಿಗೆ ನೀರು ಹರಿಸಲು ಹೆಚ್ಚಿನ ಕಾಳಜಿ ತೋರುತ್ತಿಲ್ಲ. ಅದೇ ಕಾವೇರಿ ನದಿ ನೀರಿನ ಸಮಸ್ಯೆ ಬಂದಾಗ ರಾಜ್ಯದ ಬುದ್ಧಿ ಜೀವಿಗಳು, ಚಲನಚಿತ್ರ ನಟರು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿ ತೋರುತ್ತದೆ. ಆ ಕಾಳಜಿಯನ್ನು ಕೃಷ್ಣಾ ನದಿ ವಿಷಯದಲ್ಲಿ ರಾಜ್ಯ ಸರ್ಕಾರ ತೋರುತ್ತಿಲ್ಲ ಎಂದು ಕೃಷ್ಣಾ ನದಿ ತೀರದ ಜನರು ಸಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details