ಚಿಕ್ಕೋಡಿ: ಬೆಳಗಾವಿಯ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆಗಳು ಮುಂದಿನ ದಿನಮಾನದಲ್ಲಿ ಕಾದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ರಾಯಭಾಗ ತಾಲೂಕಿನ ಕುಡಚಿ ವಿಧಾನಸಭೆ ಕ್ಷೇತ್ರದ ಕುರುಬಗೋಡಿ ಗ್ರಾಮದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾನಗರಿ ಜೆಡಿಎಸ್ ಪಕ್ಷಕ್ಕೆ ಶಕ್ತಿಯಿಲ್ಲ ಎಂದು ಹೇಳುತ್ತಾರೆ. ಆದರೆ ಮುಂದಿನ ದಿನಗಳು ಕಾದು ನೋಡಿ ಎಂದರು.
ಹಿಂದೆ 2008ರಲ್ಲಿ ಕೆಲವು ನಾಯಕರನ್ನು ನಂಬಿದ್ದೇವೆ, ಕತ್ತಲೆಯಲ್ಲಿ ನಮ್ಮ ಕುರಿಸಿ ಬಿ ಫಾರಂ ಹಂಚಿಕೆ ಮಾಡುತಿದ್ದರು. ಆದರೆ, ಈಗ ಹೊಸ ಅಧ್ಯಕ್ಷರು ಬಂದಿದ್ದಾರೆ. ತುಂಬಾ ಬದಲಾವಣೆ ತರಲಾಗಿದೆ, ಇಂಚಿಂಚು ಮಾಹಿತಿ ಪಡೆದುಕೊಂಡು ಅಭ್ಯರ್ಥಿ ಆಯ್ಕೆಯಿದೆ. ಇದರಿಂದ ಬೆಳಗಾವಿಯಲ್ಲಿ ಅಚ್ಚರಿ ಫಲಿತಾಂಶ ಪ್ರಕಟ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಜೆಡಿಎಸ್ ಪಕ್ಷ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ನೊಡಿ ಕೊಳ್ಳಬೇಕು ಜೆಡಿಎಸ್ ಪಕ್ಷಕ್ಕೆ ಎಷ್ಟಾದರೂ ಸ್ಥಾನ ಬರಲಿ ಆದರೆ ಸಿದ್ದರಾಮಯ್ಯ ಅವರಿಗೆ ಯಾವ ಕ್ಷೇತ್ರ ಎಂಬುದು ಗೊತ್ತಿಲ್ಲ ಅವರ ಸ್ಥಾನವೇ ಅತಂತ್ರವಾಗಿದೆ. ನನ್ನ ಸ್ಥಾನ ಯಾವುದು ಎಂದು ದೂರ್ಬೀನು ಹಾಕಿಕೊಂಡು ಹುಡುಕುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.
ಕನ್ನಡಪರ ಸಂಘಟನೆಗಳ ಮೇಲೆ ಗುಂಡಾ ಪ್ರಕರಣ ವಿಚಾರ ಮಾತನಾಡಿದ ಅವರು, ಬೆಳಗಾವಿ ಭಾಗದಲ್ಲಿ ಕನ್ನಡಪರ ಸಂಘಟನೆ ಮೇಲೆ ಸರ್ಕಾರ ಅನ್ಯಾಯ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಭದ್ರವಾಗಬೇಕು ಎಂದು 2006ರಲ್ಲಿ ಸುವರ್ಣ ವಿಧಾನಸೌಧ ಅಡಿಗಲ್ಲು ಸಮಾರಂಭ ಮಾಡಿ ಇಲ್ಲಿ ಅಧಿವೇಶನ ನಡೆಯುವ ರೀತಿ ನೋಡಿಕೊಂಡಿದ್ದೇವೆ. ಆದರೆ, ಮಸಿ ಬಳಿಯುವ ವಿಷಯದಲ್ಲಿ ಕನ್ನಡಪರ ಸಂಘಟನೆ ಮೇಲೆ ರೌಡಿಶೀಟರ್ ಮೊಕದ್ದಮೆ ಹಾಕಿದ್ದಾರೆ, ಅದನ್ನು ತೆಗೆದು ಹಾಕಬೇಕು ಎಂದು ಮನವಿ ಮಾಡಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಕಾಂಗ್ರೆಸ್ ಪಕ್ಷದ ರೀತಿಯಲ್ಲಿ ಜನರಿಗೆ ನಾವು ದುಡ್ಡು ಹಂಚುದಿಲ್ಲ:ಪಂಚರತ್ನ ಯಾತ್ರೆಗೆ ಉತ್ತಮ ಜನ ಸ್ಪಂದನೆ ನೀಡುತ್ತಿದ್ದಾರೆ, ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಮತದಾರರ ಪ್ರಭು ಆಶಿರ್ವಾದ ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಪಕ್ಷದ ರೀತಿಯಲ್ಲಿ ಜನರನ್ನು ನಾವು ದುಡ್ಡು ಕೊಟ್ಟು ತರುತ್ತಿಲ್ಲ ನಮ್ಮ ಪಕ್ಷಕ್ಕೆ ಆಶಿರ್ವಾದ ಮಾಡಲು ಜನಸ್ತೋಮ ಹರಿದು ಬರುತ್ತಿದೆ ಎಂದರು.