ಬೆಳಗಾವಿ:ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಆದರೆ ಜಿಲ್ಲೆಯಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಅತಿ ಪುರಾತನ ದೇವಾಲಯವೊಂದು ಪಾಳು ಬಿದ್ದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿರುವ ದೇವಾಲಯ ಇತ್ತೀಚಿನ ಹಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಕಳೆಗುಂದಿದೆ. ದೇವಾಲಯದ ಹೊರಾಂಗಣ ಹಾಗೂ ಒಳಾಂಗಣ ಗಿಡಗಂಟಿಗಳಿಂದ ತುಂಬಿಹೋಗಿದ್ದು, ನಿಧಿಗಳ್ಳರ ಹಾವಳಿಯಿಂದ ಗರ್ಭಗುಡಿಯಲ್ಲಿನ ದೇವರ ವಿಗ್ರಹಗಳು ಇಲ್ಲವಾಗಿವೆ. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನಹರಿಸದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
'ಇದು ಅಥಣಿಯಲ್ಲಿರುವ ಒಂದು ವಿಶಿಷ್ಟವಾದ ದೇವಾಲಯ. ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಪುರಾತತ್ವ ಇಲಾಖೆಯ ಪ್ರಕಾರ ಇದು ರಾಷ್ಟ್ರಕೂಟರ ಕಾಲದ್ದು ಎಂದು ಹೇಳಲಾಗಿದೆ. ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕು ಮತ್ತು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕು. ನಮ್ಮ ಪುರಾತನ ಆಸ್ತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ' ಎಂದು ದೇವಾಲಯದ ಅರ್ಚಕರ ಕುಟುಂಬಸ್ಥರಾದ ಶರತ್ ಸವದಿ ಹೇಳಿದ್ದಾರೆ.